ಕನ್ನಡಿಗರ ಶೈಕ್ಷಣಿಕ ಸಹಿತ ವಿವಿಧ ಸಮಸ್ಯೆಗೆ ಪರಿಹಾರ ಆಗ್ರಹಿಸಿ ಕರ್ನಾಟಕ ಗಡಿ ಪ್ರಾಧಿಕಾರ ನೇತೃತ್ವದಲ್ಲಿ ಮುಖ್ಯಮಂತ್ರಿ ಭೇಟಿ

ಕಾಸರಗೋಡು: ಕಾಸರಗೋಡಿನಲ್ಲಿ ಅಲ್ಪಸಂಖ್ಯಾತ ಕನ್ನಡಿಗರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಾಣಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನಿಯೋಗವೊಂದು ತಿರುವನಂತಪುರದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೇ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು, ಶೈಕ್ಷಣಿಕ ಉದ್ಯೋಗ ನೇಮಕಾತಿಯಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ನಿಯಮಾನುಸಾರ ಮೀಸಲು ಕಲ್ಪಿಸಬೇಕು, ಪಡಿತರ ಚೀಟಿ, ಮತದಾರರ ಗುರುತು ಚೀಟಿಗಳಲ್ಲಿ ಕನ್ನಡ ಭಾಷೆ ಅಳವಡಿಸಬೇಕು, ಬದಿಯಡ್ಕದ ಕಯ್ಯಾರು ಕಿಞ್ಞಣ್ಣ ರೈ ಕನ್ನಡ ಭವನಕ್ಕೆ ರಸ್ತೆ ಸಂಪರ್ಕ ಕಲ್ಪಿಸಬೇಕು, ಸಾಂಸ್ಕೃತಿಕ ಸಂಸ್ಥೆಗಳಿಗೆ ನೀಡುವ ಅನುದಾನು ಹೆಚ್ಚಿಸಬೇಕು, ಕಾಸರಗೋಡು ಜಿಲ್ಲೆಯ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಶಿಕ್ಷಕರನ್ನೇ ನೇಮಕ ಮಾಡಬೇಕು, ಡಾಕ್ಟರ್ ಪ್ರಭಾಕರನ್ ಆಯೋಗ ವರದಿ ಅನುಷ್ಟಾನಗೊಳಿಸಬೇಕು, ಕಾಸರಗೋಡು ಅಭಿವೃದ್ಧಿ ವಿಶೇಷ ಪ್ಯಾಕೇಜ್ ಘೋಷಣೆ ಮೊದಲಾದ ಬೇಡಿಕೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.  ಇದೇ ವೇಳೆ ಬದಿಯಡ್ಕದಲ್ಲಿನ ಕಯ್ಯಾರ ಕಿಞ್ಞಣ್ಣ ರೈ ಕನ್ನಡ ಸಾಂಸ್ಕೃತಿಕ ಭವನದ ಉದ್ಘಾಟನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ಆಹ್ವಾನ ನೀಡಲಾಯಿತು.

ನಿಯೋಗದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ, ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎ.ಕೆ.ಎಂ. ಅಶ್ರಫ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯ ಕಟ್ಟೆ, ಸೂರ್ಯನಾರಾಯಣ ಕುಂಜುರಾಯ, ಗಣೇಶ್‌ಪ್ರಸಾದ್ ಪಾಣೂರು, ಡಾ| ಮಲ್ಲಿಕಾರ್ಜುನ ಎಸ್. ನಾಸಿ, ಶೆರೀನ್ ಮೊಹಮ್ಮದ್ ಉಪಸ್ಥಿತರಿದ್ದರು. ಬಳಿಕ ನಿಯೋಗ ವಿಧಾನಸಭಾ ಸ್ಪೀಕರ್ ಶಂಸೀರ್, ವಿಪಕ್ಷ ನಾಯಕ ವಿ.ಡಿ. ಸತೀಶನ್‌ರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

RELATED NEWS

You cannot copy contents of this page