ಕಾಸರಗೋಡು: ಕಳವು ಪ್ರಕರಣದ ಆರೋಪಿಯನ್ನು ಸೆರೆಹಿಡಿಯಲು ಬಂದ ಕರ್ನಾಟಕ ಪೊಲೀಸರನ್ನು ಆರೋಪಿ ಮತ್ತು ಆತನ ಸಂಗಡಿಗರು ಸೇರಿ ದಾಳಿ ನಡೆಸಿ ಅದರ ಪರಿಣಾಮ ಮೂವರು ಪೊಲೀಸರು ಗಾಯಗೊಂಡ ಘಟನೆ ನಡೆದಿದೆ.
ಕರ್ನಾಟಕ ಮಲ್ಪೆ ಪೊಲೀಸ್ ಠಾಣೆ ಎಎಸ್‌ಐ ಹರೀಶ್ (35), ಹೆಡ್‌ಕಾನ್ ಸ್ಟೇಬಲ್ ಇ. ಲೋಕೇಶ್ (45) ಮತ್ತು ಅವರಿಗೆ ಸಹಾಯ ಮಾಡಲು ಅವರ ಜತೆಗೆ ಬಂದಿದ್ದ ಬೇಕಲ ಪೊಲೀಸ್ ಠಾಣೆಯ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ವಿ.ಎಂ. ಪ್ರಸಾದ್ ಕುಮಾರ್ (42) ಎಂಬವರು ಈ ದಾಳಿಯಲ್ಲಿ ಗಾಯಗೊಂಡಿದ್ದು, ಅವ ರನ್ನು ಬಳಿಕ ಚಿಕಿತ್ಸೆಗೊಳಪಡಿಸಲಾಗಿದೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲುಗೊಂಡಿರುವ ಕಳವು ಪ್ರಕರಣವೊಂದರ ಆರೋಪಿಯಾಗಿರುವ ಪನಯಾಲ್ ಚೆರುಂಬಾದ ಎ.ಎಚ್. ಹಾಶಿಂ (34)ನನ್ನು ಬಂಧಿಸಿ ಹಾಜರು ಪಡಿಸುವಂತೆ ನಿರ್ದೇಶಿಸಿ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಅದರಂತೆ ಮಲ್ಪೆ ಪೊಲೀಸ್ ಠಾಣೆಯ ಎಎಸ್‌ಐ ಹರೀಶ್ ನೇತೃತ್ವದ ಕರ್ನಾಟಕ ಪೊಲೀಸರ ತಂಡ ಬೇಕಲ ಪೊಲೀಸರ ಸಹಾಯದೊಂದಿಗೆ ನಿನ್ನೆ ಪೆರಿಯಾಟಡ್ಕ ಪರುಂಬಾ ಮಸೀದಿ ಬಳಿ ಬಂದು ಆರೋಪಿ ಹಾಶಿಂನನ್ನು ಅಲ್ಲಿಂದ ಸೆರೆಹಿಡಿಯಲೆತ್ನಿಸಿದಾಗ ಆತ ಮತ್ತು ಇತರ ಐದು ಮಂದಿ ಸೇರಿ ಪೊಲೀಸರ ಮೇಲೆ ದಾಳಿ ನಡೆಸಿದರೆಂದು ಆರೋಪಿಸಲಾಗಿದೆ. ಅದಾಗ್ಯೂ ಆರೋಪಿ ಹಾಶಿಂನನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಪೊಲೀಸರ ಮೇಲೆ ದಾಳಿ ನಡೆಸಿದ ಬಗ್ಗೆ ಎನ್‌ಸಿಪಿಒ ಪ್ರದೀಪ್ ಕುಮಾರ್ ನೀಡಿದ ದೂರಿನಂತೆ ಪೊಲೀಸರ ಮೇಲೆ ಹಲ್ಲೆಗೊಳಿಸುವಿಕೆ, ಅವರ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸುವಿಕೆ ಇತ್ಯಾದಿ ಸೆಕ್ಷನ್‌ಗಳ ಪ್ರಕಾರ ಹಾಶಿಂ ಮತ್ತು ಕಂಡಲ್ಲಿ ಗುರುತುಹಚ್ಚಲು ಸಾಧ್ಯವಾಗಿರುವ ಇತರ ಐದು ಮಂದಿಯ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.