ಮುಳ್ಳೇರಿಯ/ಕಾಸರಗೋಡು: ಭಾರತಕ್ಕೆ ಕಾಶ್ಮೀರ ಮುಕುಟವಾದರೆ ಕೇರಳಕ್ಕೆ ಕಾಸರಗೋಡು ಮುಕುಟವಾಗಿದೆ. ಆದ್ದರಿಂದ ಇಲ್ಲಿ ಬಿಜೆಪಿ ಗೆಲ್ಲಬೇಕೆಂದು ಕೇಂದ್ರ ಸಚಿವ ಸುರೇಶ್‌ಗೋಪಿ ಹೇಳಿದ್ದಾರೆ.
ಮುಳ್ಳೇರಿಯ ಮತ್ತು ಕಾಸರಗೋಡು ಕಸಬಾ ಕಡಪ್ಪುರ ಎಂಬೆಡೆಗಳಲ್ಲಾಗಿ ನಿನ್ನೆ ನಡೆದ ಎನ್‌ಡಿಎ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮಹಿಳಾ ಅಭ್ಯರ್ಥಿಯಾದ ಎಂ.ಎಲ್. ಅಶ್ವಿನಿ ಗೆದ್ದು ಬರಬೇಕು. ಅದಕ್ಕೆ ತಮ್ಮ ಅಮೂಲ್ಯವಾದ ಮತಗಳನ್ನು ಅವರಿಗೆ ನೀಡಬೇಕೆಂದು ಸಚಿವರು ವಿನಂತಿಸಿಕೊಂಡರು.
ಕೇಂದ್ರ ಸರಕಾರದ ಯೋಜನೆಗಳನ್ನು ಕೇರಳದಲ್ಲಿ ಜ್ಯಾರಿಗೊಳಿಸದೆ ರಾಜ್ಯ ಸರಕಾರ ಇಲ್ಲಿನ ಜನರನ್ನು ವಂಚಿಸುತ್ತಿದೆ. ಆಯುಷ್ಮಾನ್ ಭಾರತ್, ಜಲ್‌ಜೀವನ್ ಮಿಶನ್ ಸೇರಿದಂತೆ ಕೇಂದ್ರದ ಹೆಚ್ಚಿನ ಎಲ್ಲಾ ಯೋಜನೆಗಳನ್ನು ಕೇರಳ ಸರಕಾರ ಇಲ್ಲಿ ಜ್ಯಾರಿಗೊಳಿಸಿಲ್ಲವೆಂದು ಅವರು ಹೇಳಿದರು. ಕುಂಬಳೆಯ ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಸಾವನ್ನು ನಿಲುಗಡೆಗೊಳಿಸಿದ್ದು ಇಲ್ಲಿನ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿಯವರು ನಡೆಸಿದ ನಿರಂತರ ಪ್ರಯತ್ನ ಹಾಗೂ ಅದಕ್ಕೆ ಪೂರಕವಾಗಿ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್‌ರ ಮಧ್ಯಸ್ಥಿಕೆಯ ಫಲವಾಗಿ ಅದಕ್ಕೆ ಹೊಂದಿಕೊಂಡು ಕೇಂದ್ರಸರಕಾರ ಟೋಲ್ ಪ್ಲಾಸಾದಲ್ಲಿ ಶುಲ್ಕ ವಸೂಲಿಯನ್ನು ರದ್ದುಪಡಿಸಿ ಅಧಿಸೂಚನೆ ಜ್ಯಾರಿಗೊಳಿಸಿತ್ತು. ಅಲ್ಲದೆ ಕೆಲವರು ಈ ವಿಷಯದಲ್ಲಿ ನಡೆಸಿದ ನಾಟಕದಿಂದ ಇದೇನೂ ನಡೆದಿಲ್ಲವೆಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದರು.
ಕೇರಳವನ್ನು ಅಭಿವೃದ್ಧಿಯತ್ತ ಸಾಗಿಸುವ ಕೇಂದ್ರ ಸರಕಾರದ ಯೋಜನೆಗಳನ್ನು ಕೇರಳದಲ್ಲಿ ಜ್ಯಾರಿಗೊಳಿಸುವುದಿಲ್ಲವೆಂಬ ರಾಜ್ಯ ಸರಕಾರದ ಹಠಮಾರಿತನ ನಿಲುವೇ ಅಂತಹ ಹಲವು ಯೋಜನೆಗಳು ಕೇರಳದಲ್ಲಿ ಜ್ಯಾರಿಗೊಳ್ಳದೇ ಇರುವುದಕ್ಕೆ ಕಾರಣವಾಗಿದೆ. ಭಾಷಣದ ವೇಳೆ ಸಚಿವರು ಆಗಾಗ ಕನ್ನಡದಲ್ಲಿ ಮಾತನಾಡಿರುವುದು ಅದು ಸಭಿಕರನ್ನು ಇನ್ನಷ್ಟು ಆವೇಶಭರಿತರನ್ನಾಗಿಸಿತು. ಮುಳ್ಳೇರಿಯದಲ್ಲಿ ನಿನ್ನೆ ಸಂಜೆ ೫ ಗಂಟೆಗೆ ಚುನಾವಣಾ ಪ್ರಚಾರ ನಿಗದಿಪಡಿಸಲಾಗಿತ್ತಾರೂ ಅಲ್ಪ ವಿಳಂಬಗೊಂಡಿತು.
ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಸಚಿವರು ಮುಳ್ಳೇರಿಯದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದ ಬಳಿಕ ಕಾಸರಗೋಡು ಕಸಬಾ ಕಡಪ್ಪುರದಲ್ಲಿ ನಡೆದ ಎನ್‌ಡಿಎ ಪ್ರಚಾರಸಭೆಯಲ್ಲೂ ಭಾಗವಹಿಸಿ ಮಾತನಾಡಿದರು.
ಬಿಜೆಪಿಯ ಚುನಾವಣಾ ಸಮಿತಿ ಸಂಚಾಲಕ ರವೀಶ ತಂತ್ರಿ ಕುಂಟಾರು, ಬಿಜೆಪಿ ಕಲ್ಲಿಕೋಟೆ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಕರುಣಾಕರನ್ ನಂಬ್ಯಾರ್, ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ, ಸಂತೋಷ್ ಶೆಟ್ಟಿ, ಎಂ. ಜನನಿ, ರವೀಂದ್ರ ರೈ ಗೋಸಾಡ, ಕರುಣಾಕರನ್ ಮಾಸ್ತರ್, ಯಶೋಧ, ಗೋಪಾಲಕೃಷ್ಣನ್ ಮೊದಲಾದವರು ಮುಳ್ಳೇರಿಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಕಾಸರಗೋ ಡಿನಲ್ಲೂ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್ ಸೇರಿ ಹಲವರು ಮಾತನಾಡಿದರು.







