ಕೊಚ್ಚಿ: ದುಬಾಯಿಯಿಂದ ನಿನ್ನೆ ಮುಂಜಾನೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಾಸರಗೋಡು ಕಿಳಕ್ಕೇಕರೆ ತವಕ್ಕಲ್ ಮಂಜಿಲ್‌ನ ನಿವಾಸಿ ಮುಹಮ್ಮದ್ ಶಾಫಿ (40)ನನ್ನು ಬಂಧೂಕು ತೋರಿಸಿ ಅಪಹರಿಸಿಕೊಂಡು ಹೋಗಿ ಹ್ಯಾಂಡ್ ಬ್ಯಾಗ್ ಹಾಗೂ ಐಫೋನ್ ಮತ್ತು ಸಾಮಗ್ರಿಗಳನ್ನು ಅಪಹರಿಸಿದ ಘಟನೆ ನಡೆದಿದೆ. ಚಿನ್ನ ಎಲ್ಲಿದೆ ಎಂದು ಪ್ರಶ್ನಿಸಿ ಹಲ್ಲೆಗೈದ ಬಳಿಕ ೬ ಮಂದಿಯ ತಂಡ ಕಾರಿನಲ್ಲಿ ಸುತ್ತಾಟ ನಡೆಸಿ ಇವರನ್ನು ಪ್ರಶ್ನಿಸಿದ್ದು, ಬಳಿಕ ಬೆದರಿಕೆಯೂ ಒಡ್ಡಿದೆ ಎನ್ನಲಾಗಿದೆ. ಕೊನೆಗೆ ಆಲುವಾ ಪರವೂರ್‌ನಲ್ಲಿ ಕಾರಿನಿಂದ ಇವರನ್ನು ಇಳಿಸಿ ತಂಡ ಪರಾರಿಯಾಗಿದೆ. ಈ ಬಗ್ಗೆ ಯಾರಲ್ಲಾದರೂ ತಿಳಿಸಿದರೆ ಕೊಲೆಬೆದರಿಕೆಯೊಡ್ಡಿ ರುವುದಾಗಿಯೂ ಮುಹಮ್ಮದ್ ಶಾಫಿ ಪೊಲೀಸರಲ್ಲಿ ತಿಳಿಸಿದ್ದಾರೆ. ಆಲುವಾ ಡಿವೈಎಸ್‌ಪಿ ರಾಜೇಶ್‌ರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.
ಅಪಹರಣ ಕೃತ್ಯದಲ್ಲಿ ಚಿನ್ನ ಕಳ್ಳಸಾಗಾಟ ತಂಡಕ್ಕೆ ಸಂಬಂಧವಿದೆಯೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ದುಬಾಯಿ ಅಜ್ಮಾನ್‌ನ ಒಂದು ಕ್ಯಾಂಟೀನ್ ನೌಕರನಾಗಿದ್ದಾರೆ ಮುಹಮ್ಮದ್ ಶಾಫಿ. ನಿನ್ನೆ ಮುಂಜಾನೆ 12.30 ರ ವೇಳೆ ಕೊಚ್ಚಿ ಇಂಟರ್‌ನ್ಯಾಶನಲ್ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಪ್ರೀಪೇಯ್ಡ್ ಟ್ಯಾಕ್ಸಿ ಕೌಂಟರ್‌ಗೆ ತೆರಳುತ್ತಿದ್ದ ಮಧ್ಯೆ ಹಿಂದಿನಿಂದ ತಲುಪಿದ ಮೂರು ಮಂದಿ ಬಂಧೂಕು ತೋರಿಸಿ ಕಾರಿನಲ್ಲಿ ಅಪಹರಿಸಿಕೊಂಡುಹೋಗಿದ್ದಾರೆ ಎಂದು ಶಾಫಿ ದೂರಿದ್ದಾರೆ. ಕಾರಿನಲ್ಲಿ ಒಟ್ಟು ಆರು ಮಂದಿಯಿದ್ದರೆನ್ನಲಾಗಿದೆ. ಕಾರಿನಲ್ಲಿ ಚಿನ್ನ ಎಲ್ಲಿ ಎಂದು ಪ್ರಶ್ನಿಸಿ ಆಕ್ರಮಿಸಲಾಗಿದೆ ಎಂದು ಶಾಫಿ ತಿಳಿಸಿದ್ದಾರೆ. ಕೊನೆಗೆ ಸಾಮಗ್ರಿಗಳನ್ನು ತಂದ ಪೆಟ್ಟಿಗೆ ಹಾಗೂ ಹ್ಯಾಂಡ್ ಬ್ಯಾಗ್ ಮೊದಲಾದ ವಸ್ತುಗಳನ್ನು ಅಪಹರಿಸಿದ ಬಳಿಕ ರಸ್ತೆಯಲ್ಲಿ ಉಪೇಕ್ಷಿಸಿರುವುದಾಗಿ ಶಾಫಿ ತಿಳಿಸಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.






