ಕಾಸರಗೋಡು ಶ್ರೀ ಗಣೇಶೋತ್ಸವ: ಹಿಂದೂ ಸಮಾಜ ಹರಿಯುವ ನೀರಾಗಬೇಕು- ತನ್ಮಯ್ ಪ್ರೇಮ್ ಕುಮಾರ್

ಕಾಸರಗೋಡು: ಹಿಂದೂ ಸಮಾಜವು ಎಂದೂ ನಿಂತ ನೀರಾಗಬಾರದು, ಬದಲಾಗಿ ಹರಿಯುವ ನೀರಾಗಬೇಕು ಎಂದು ಖ್ಯಾತವಾಗ್ಮಿ ತನ್ಮಯ್ ಪ್ರೇಮ್ ಕುಮಾರ್ ಚಿಕ್ಕಮಗಳೂರು  ಹೇಳಿದ್ದಾರೆ. ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಪ್ತತಿ ಮಹೋತ್ಸವದಂಗ ವಾಗಿ ನಿನ್ನೆ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಪ್ರಧಾನ ಭಾಷಣ ಮಾಡಿದರು.

ನಮ್ಮ ಮನೆಗಳಲ್ಲಿ ಹಿಂದುತ್ವದ ಬಗ್ಗೆ ಶೃದ್ಧೆಯಿಂದ ಕಲಿಯುವುದನ್ನು ನಾವು ಮರೆಯುತ್ತಿದ್ದೇವೆ. ನಾವು ಇಂದು ನಮ್ಮ ಧರ್ಮದ ಬಗ್ಗೆ ಬೋಧನೆ ಮಾಡುತ್ತಿದ್ದೇವೆ, ಆದರೆ ಆಚರಣೆ ಕಡಿಮೆಯಾಗುತ್ತಿದೆ. ಮುಂದಿನ ತಲೆಮಾರಿಗೆ ಹಿಂದುತ್ವದ ಬಗ್ಗೆ ಸಮಗ್ರ ಅರಿವು ಮೂಡಿಸಬೇಕು. ಆಚರಣೆಗಳನ್ನು ನಾಶಪಡಿಸಲು ದೇಶಾದ್ಯಂತವಾಗಿ ಬಹುದೊಡ್ಡ ಜಾಲ ಕಾರ್ಯಾಚರಿಸುತ್ತಿದೆ. ಇದು ಅತ್ಯಂತ ಅಪಾಯಕರವಾಗಿದ್ದು, ಆ ಬಗ್ಗೆ ನಾವು ನಿರಂತರ ಜಾಗರೂಕರಾಗಿರಬೇಕಾಗಿರುವ ಅಗತ್ಯವಿದೆ. ಸ್ವಾತಂತ್ರ್ಯ ಲಭಿಸುವುದಕ್ಕಾಗಿ ಲೋಕಮಾನ್ಯ ಬಾಲಗಂಗಾಧರ ತಿಲಕ್ ಗಣಪತಿ ಉತ್ಸವವನ್ನು ಸಾರ್ವತ್ರಿಕವಾಗಿ ಪ್ರಾರಂಭಿಸಿದ್ದಾರೆ. ಇಂದು ಗ್ರಾಮೀಣ ಪ್ರದೇಶಗಳಲ್ಲ್ಲೂ ಶ್ರೀ ಗಣೇಶೋತ್ಸವ ನಡೆಯುತ್ತಿದ್ದು, ಇದು ಹಿಂದೂ ಸಮಾಜವನ್ನು ಬಲಿಷ್ಠಗೊಳಿಸಲು ಒಂದು ಅಭೂತಪೂರ್ವ ಶಕ್ತಿಯಾಗಿ ಪರಿಣಮಿ ಸುತ್ತಿದೆ ಎಂದು ಅವರು ಹೇಳಿದರು.

ಹಿಂದುಗಳು ಮಾತ್ರ ಜಾತ್ಯಾತೀತ ರಾಗಬೇಕು, ಆದರೆ ಮತೀಯ ಅಲ್ಪ ಸಂಖ್ಯಾತರು ಜಾತ್ಯಾತೀತವಾಗದಿ ದ್ದರೂ ಸಮಸ್ಯೆಯಿಲ್ಲ ಎಂದು ಹಿಂದೂ ವಿರೋಧಿಗಳು ಹೇಳುತ್ತಿದ್ದಾರೆ. ಇದು ಎಲ್ಲಿನ ನ್ಯಾಯ ಎಂದು ತನ್ಮಯ್ ಪ್ರಶ್ನಿಸಿದರು. ನಾವು ಯಾರು, ನಮ್ಮ ಪರಂಪರೆ, ವೈಶಿಷ್ಟ್ಯವೇನು ಎಂಬುದರ ಬಗ್ಗೆ ನಮಗೆ ಸರಿಯಾದ ಅರಿವಿಲ್ಲ. ಇದರಿಂದಾಗಿ ಮತಾಂತರದಂತಹ ಸಾಮಾಜಿಕ ಪಿಡುವು ಅಷ್ಟೊಂದು ಬೆಳೆಯಲು ಕಾರಣ ಹಿಂದೂ ಧಾರ್ಮಿಕ ವ್ಯವಸ್ಥೆಯನ್ನು ಯುವಜನಾಂಗ ಪ್ರಶ್ನಿಸುತ್ತಿರುವುದು ನಿಜಕ್ಕೂ ದುರದೃಷ್ಟಕರವೆಂದು ಅವರು ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕೇರಳ ಪ್ರಾಂತ್ಯ ಸಂಘಚಾಲಕ್ ನ್ಯಾಯವಾದಿ ಕೆ.ಕೆ. ಬಲರಾಮ್ ಕಣ್ಣೂರು ಮಾತನಾಡಿ, ಕ್ಷೇತ್ರಗಳ ಉತ್ಸವ ಮತ್ತು ಕ್ಷೇತ್ರ ನಿರ್ಮಾಣ ಜನರ ಧಾರ್ಮಿಕ ಜೀವನ ಪೋಷಿಸುವುದಕ್ಕೆ ಅಡಿಪಾಯವಾಗಿದೆ ಎಂದು ಹೇಳಿದರು. ಧಾರ್ಮಿಕ ಮುಂದಾಳು ರವೀಶತಂತ್ರಿ ಕುಂಟಾರು,  ರಘುವೀರ್ ಕಾಮತ್ ಮಂಗಳೂರು, ಸುರೇಶ್ ಕಾಮತ್ ಬೆಂಗಳೂರು, ಪಿ. ಗಣೇಶ್ ಮಂಗಳೂರು ಮೊದಲಾದವರು ಮಾತನಾಡಿದರು. ರೂಪಾ ಹೊಳ್ಳ ಸ್ವಾಗತಿಸಿ, ದೇವದಾಸ್ ನುಳ್ಳಿಪ್ಪಾಡಿ ನಿರೂಪಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಶ್ರೀ ಮಲ್ಲಿಕಾರ್ಜುವ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ಗಣೇಶೋತ್ಸವ ಸಪ್ತತಿ ಮಹೋತ್ಸವ ಇಂದು ಸಮಾರೋಪ: ವಿಗ್ರಹ ವಿಸರ್ಜನಾ ಮೆರವಣಿಗೆ ಸಂಜೆ

ಕಾಸರಗೋಡು: ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅಗೋಸ್ತ್ 27ರಿಂದ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತೀ ಸಂಭ್ರಮದಿಂದ ಜರಗುತ್ತಿರುವ ಸಾರ್ವಜನಿಕ ಶ್ರೀ ಗಣೋಶೋತ್ಸವದ ಸಪ್ತತಿ ಮಹೋತ್ಸವ ಇಂದು ಸಂಜೆ  ವಿಗ್ರಹ ವಿಸರ್ಜನೆಯೊಂದಿಗೆ ಸಮಾರೋಪಗೊಳ್ಳಲಿದೆ. ಇದರಂಗವಾಗಿ ನಡೆಯುವ ಅಯುತ ನಾಳಿಕೇರ ಮಹಾಗಣಪತಿ ಯಾಗ ಇಂದು ಮಧ್ಯಾಹ್ನ 12 ಗಂಟೆಗೆ ಮಹಾಪೂರ್ಣಾಹುತಿಗೊಳ್ಳಲಿದೆ. 12.45ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಪ್ತತಿ ಮಹೋತ್ಸವ ಸಮಿತಿ ಅಧ್ಯಕ್ಷ ಸಿ.ವಿ. ಪೊದುವಾಳ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಶ್ರೀ ಮತಾ ಅಮೃತಾನಂದಮಯಿ ಮಠದ ಬ್ರಹ್ಮಃ ವೇದ ವೇದ್ಯಾಮೃತ ಚೈತನ್ಯ ಉಪಸ್ಥಿತರಿರುವರು.  ಇದರಂಗವಾಗಿ ಜರಗಿದ ವಿವಿಧ ಸ್ಪರ್ಧಾ ವಿಜೇತರಿಗೆ  ಬಹುಮಾನ ವಿತರಣೆ ನಡೆಯಲಿದೆ.  ಸಂಜೆ 4 ಗಂಟೆಗೆ ಧ್ವಜಾವತರಣ, ಮಹಾಪೂಜೆ, ಶ್ರೀ ಮಹಾಗಣ ಪತಿಯ ವಿಗ್ರಹ ವಿಸರ್ಜನಾ ಮೆರವಣಿಗೆ ನಡೆಯಲಿರುವುದು. ಮೆರವಣಿಗೆ ಬ್ಯಾಂಕ್ ರಸ್ತೆ, ಶಿವಾಜಿನಗರ, ಅಶ್ವಿನಿನಗರ, ನೇತಾಜಿ ವೃತ್ತ, ಮಹಾತ್ಮಾಗಾಂಧಿ ರಸ್ತೆ, ಶ್ರೀರಾಮಪೇಟೆ ಮೂಲಕ ಸಾಗಿ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಶ್ರೀ ಲಕ್ಷ್ಮೀ ಸರೋವರದಲ್ಲಿ ವಿಗ್ರಹ ಜಲಸ್ತಂಭನಗೊಳಿಸಲಾಗುವುದು.

You cannot copy contents of this page