ಕಾಸರಗೋಡು: ಜಪಾನಿನ ಭಾರತೀಯ ರಾಯಭಾರಿಯಾಗಿ ಕಾಸರಗೋಡು ನಿವಾಸಿ ನಗ್ಮಾ ಮೊಹಮ್ಮದ್ ಮಾಲೀಕ್‌ರನ್ನು ಕೇಂದ್ರ ಸರಕಾರ ನೇಮಿಸಿದೆ.
ಇವರು ಕಾಸರಗೋಡು ಕೋಟೆ ರಸ್ತೆಯ ಮೊಹಮ್ಮದ್ ಹಬೀಬುಲ್ಲಾ-ಸುಲುಭಾನು ದಂಪತಿ ಪುತ್ರಿಯಾಗಿದ್ದಾರೆ. ತಂದೆ ಮೊಹಮ್ಮದ್ ಹಬೀಬುಲ್ಲಾರಿಗೆ ಕೇಂದ್ರ ಸರಕಾರದ ಓವರ್‌ಸೀಸ್ ಕಮ್ಯೂನಿಕೇಶನ್ ಇಲಾಖೆಯಲ್ಲಿ ಉದ್ಯೋಗ ಲಭಿಸಿದ ಹಿನ್ನೆಲೆಯಲ್ಲಿ ಅವರು ವರ್ಷಗಳ ಹಿಂದೆ ತಮ್ಮ ಕುಟಂಬದ ಸಹಿತ ದಿಲ್ಲಿಯಲ್ಲಿ ವಾಸವಾಗಿದ್ದರು. ದಿಲ್ಲಿಯಲ್ಲೇ ಜನಿಸಿದ ನಗ್ಮಾ ಮೊಹಮ್ಮದ್ ಮಾಲೀಕ್ ದಿಲ್ಲಿಯ ಸೈಂಟ್ ಸ್ಟೀಫನ್ ಕಾಲೇಜು ಮತ್ತು ಡೆಲ್ಲಿ ಸ್ಕೂಲ್ ಆಫ್ ಇಕಾನೋಮಿಕ್ಸ್‌ನಲ್ಲಿ ಶಿಕ್ಷಣ ಪಡೆದರು. ಇವರು ಇಂಗಿಷ್ ಸಾಹಿತ್ಯದಲ್ಲಿ ಪದವೀಧರೆ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದಾರೆ. ಇವರು ಈ ಹಿಂದೆ ಪೋಲೆಂಡ್‌ನಲ್ಲಿ ಭಾರತೀಯ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಪ್ಯಾರಿಸ್ ಯುನೆಸ್ಕೋದ ಭಾರತೀಯ ಮಿಷನ್‌ನಲ್ಲಿ ಇವರು ಮೊದಲ ನೇಮಕಾತಿ ಪಡೆದಿದ್ದರು.
ಭಾರತದ ಮೊದಲ ಮಹಿಳಾ ಡೆಪ್ಯುಟಿ ಚೀಫ್ ಪ್ರೊಟೋಕಾಲ್ (ಸೆರೆಮೋನಿಯಲ್) ಆಗಿಯೂ ಇವರು ಈ ಹಿಂದೆ ಸೇವೆ ಸಲ್ಲಿಸಿದ್ದರು. ಬಳಿಕ 1991ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರ್ಪಡೆಗೊಂಡರು. ಪ್ಯಾರೀಸ್‌ನಲ್ಲಿ ರಾಜ ತಾಂತ್ರಿಕ ಜೀವನ ಆರಂಭಿಸಿದ ಇವರು ಯುನೆಸ್ಕೋದಲ್ಲೂ ಸೇವೆ ಸಲ್ಲಿಸಿದ್ದಾರೆ. ದಿ| ಐ.ಕೆ. ಗುಜ್ರಾಲ್ ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ನಗ್ಮಾ ಅವರ ಪರ್ಸನಲ್ ಸ್ಟಾಫ್‌ನಲ್ಲಿ ವೆಸ್ಟ್ ಯುರೋಪ್ ವಿಭಾಗದ ಮುಖ್ಯಸ್ಥರಾಗಿಯೂ ಮಾತ್ರವಲ್ಲ ನೇಪಾಳ ಮತ್ತು ಶ್ರೀಲಂಕಾದಲ್ಲಿ ಭಾರತೀಯ ಫಸ್ಟ್ ಸೆಕ್ರೆಟರಿ ಹಾಗೂ ಕೌನ್ಸಿಲರ್ ಆಗಿಯೂ ಸೇವೆ ಸಲ್ಲಿಸಿದ್ದರು.ಅಲ್ಲದೆ ಹಲವು ವಿದೇಶ ರಾಷ್ಟ್ರಗಳಲ್ಲೂ ಇವರು ಭಾರತೀಯ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್‌ರ ಸಹೋದರಿ ಪುತ್ರಿಯಾಗಿರುವ ನಗ್ಮಾರ ಮಾವ ಭಾರತೀಯ ಸೇನಾ ಪಡೆಯ ಲೆಫ್ಟಿನೆಂಟ್ ಪಿ. ಮುಹಮ್ಮದ್ ಹಾಶಿಂ 1965ರಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಹೋರಾಡಿ 23ನೇ ವಯಸ್ಸಿನಲ್ಲೇ ದೇಶಕ್ಕಾಗಿ ಪ್ರಾಣತ್ಯಾಗಗೈದಿದ್ದರು. ಇವರ ಗೌರವ ಸೂಚಕವಾಗಿ ಕಾಸರಗೋಡು ನಗರದ ತಳಂಗರೆಯ ಒಂದು ರಸ್ತೆಗೆ ಅವರ ಹೆಸರಿಡಲಾಗಿದೆ. ಮಾತ್ರವಲ್ಲದೆ ನಗರದ ಪಿಲಿಕುಂಜೆಯಲ್ಲಿ ಅವರ ಸ್ಮಾರಕವನ್ನು ನಿರ್ಮಿಸಲಾಗಿದೆ.







