ಉಪ್ಪಳ: ಶಾಲೆಯಲ್ಲಿ ಆಹಾರ ತಯಾರಿಸುತ್ತಿದ್ದಾಗ ಸ್ಟವ್ನಿಂದ ದೇಹಕ್ಕೆ ಬೆಂಕಿ ತಗಲಿ ಗಂಭೀರ ಸುಟ್ಟು ಗಾಯಗೊಂಡ ಅಡುಗೆ ಕಾರ್ಮಿಕೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು.
ಬಂಗ್ರಮಂಜೇಶ್ವರ ಸರಕಾರಿ ಶಾಲೆಯ ಅಡುಗೆ ಕಾರ್ಮಿಕೆಯಾದ ಉದ್ಯಾವರ ಮಾಡ ನಿವಾಸಿ ಜಯ (56) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.
ನಿನ್ನೆ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ನಿಧನ ಸಂಭವಿಸಿದೆ. ಡಿಸೆಂಬರ್ 16ರಂದು ಬೆಳಿಗ್ಗೆ 11 ಗಂಟೆ ವೇಳೆ ದುರ್ಘಟನೆ ಸಂಭವಿಸಿತ್ತು. ಶಾಲೆಯ ಅಡುಗೆ ಕೋಣೆಯಲ್ಲಿ ಆಹಾರ ತಯಾರಿಸು ತ್ತಿದ್ದಾಗ ಗ್ಯಾಸ್ ಸ್ಟವ್ನಿಂದ ಸೀರೆಗೆ ಬೆಂಕಿ ಹತ್ತಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಬೊಬ್ಬೆ ಕೇಳಿ ತಲುಪಿದ ಅಧ್ಯಾಪಕರು ಸಹಿತ ಇತರರು ಜಯರನ್ನು ಸಮೀಪದ ಆಸ್ಪತ್ರೆಗೆ ತಲುಪಿಸಿದ್ದರು. ಆದರೆ ಗಂಭೀರ ಸುಟ್ಟು ಗಾಯಗೊಂಡಿ ದ್ದುದರಿಂದ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಜಯರ ಅಕಾಲಿಕ ನಿಧನದಿಂದ ಶಾಲೆ ಹಾಗೂ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಕಳೆದ 20 ವರ್ಷಗಳಿಂದ ಇವರು ಶಾಲೆಯಲ್ಲಿ ಅಡುಗೆ ಕಾರ್ಮಿಕೆಯಾಗಿದ್ದರು. ದಿ| ಕೃಷ್ಣ ಎಂಬವರ ಪುತ್ರಿಯಾದ ಮೃತರು ತಾಯಿ ಯಮುನ, ಪತಿ ಹರಿಣಾಕ್ಷ, ಮಕ್ಕಳಾದ ಹಿತೇಶ್, ಪ್ರಸನ್ನಗಣೇಶ್, ದೀಪ, ಅಳಿಯ ಸುರೇಶ, ಸಹೋದರ-ಸಹೋದರಿಯರಾದ ಯೋಗೀಶ, ದಿವಾಕರ, ಕುಸುಮ, ಪುಷ್ಪ, ಶೋಭಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







