ಕುಂಬಳೆ: ವೇಗವಾಗಿ ಬೆಳೆಯುತಿ ರುವ ಕುಂಬಳೆ ಪೇಟೆಯಲ್ಲಿ ಇತ್ತೀ ಚೆಗಿನಿಂದ ಜ್ಯಾರಿಗೊಳಿಸಿದ ನೂತನ ಟ್ರಾಫಿಕ್ ವ್ಯವಸ್ಥೆಯಿಂದಾಗಿ ಕುಂಬಳೆಗೆ ದಿನನಿತ್ಯ ಬರುವ ಸಾವಿರಾರು ಪ್ರಯಾಣಿಕರು ಹಾಗೂ ವ್ಯಾಪಾರಿಗಳು ತೀವ್ರ ಸಮಸ್ಯೆಯನ್ನು ಎದುರಿಸುತ್ತಿ ದ್ದಾರೆಂದು ಬಿಜೆಪಿ ಪಂಚಾಯತ್ ಸಮಿತಿ ಸಭೆ ಅಭಿಪ್ರಾಯಪಟ್ಟಿದೆ. ಈಗ ಜ್ಯಾರಿಗೊಳಿಸಿದ ನೂತನ ಟ್ರಾಪಿಕ್ ನಿಯಮಗಳಲ್ಲಿ ಕೆಲವು ವ್ಯತ್ಯಾಸಗಳನ್ನು ಮಾಡಲು ಅಧಿಕಾರಿಗಳು ಗಮನಹರಿ ಸಬೇಕೆಂದು ಬಿಜೆಪಿ ಒತ್ತಾಯಿಸಿದೆ.
ಕುಂಬಳೆ ಪೊಲೀಸ್ ಠಾಣೆ ರಸ್ತೆಯ ಸಮೀಪ ಗ್ರಾಮ ಪಂಚಾಯತ್, ಕೃಷಿ ಭವನ, ಗ್ರಾಮ ಕಚೇರಿ, ಮೃಗಾಸ್ಪತ್ರೆ, ನೀರಾವರಿ ಇಲಾಖೆ ಕಚೇರಿ, ವಿದ್ಯುತ್ ಕಚೇರಿ, ಎರಡು ಪ್ರಮುಖ ಬ್ಯಾಂಕ್‌ಗಳು, ಮೀನು ಮಾರುಕಟ್ಟೆ ಹಾಗೂ ಇನ್ನಿತರ ಹಲವಾರು ವ್ಯಾಪಾರ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಕುಂಬಳೆ ಪೇಟೆಗೆ ಗ್ರಾಮೀಣ ಪ್ರದೇಶದಿಂದ ಬರುವ ಜನರಿಗೆ ಬೇಕಾಗಿ ಕುಂಬಳೆ ಪಂಚಾಯತ್ ಸಮೀಪ ಕಳತ್ತೂರು, ಬಂಬ್ರಾಣ, ಅರಿಕ್ಕಾಡಿ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೇಲೆ ತಿಳಿಸಿದ ಸ್ಥಳಗಳಿಗೆ ಹೋಗುವ ಬಸ್‌ಗಳ ನಿಲ್ದಾಣವನ್ನು ಕುಂಬಳೆ ಗ್ರಾಮ ಪಂಚಾಯತ್ ಸಮೀಪ ಏರ್ಪಡಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಕುಂಬಳೆ ಪೇಟೆಯಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಆಟೋ ರಿಕ್ಷಾ ಚಾಲಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರಿಗೂ ಸರಿಯಾದ ನಿಲ್ದಾಣದ ವ್ಯವಸ್ಥೆಯನ್ನು ಮಾಡಬೇಕೆಂದು ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಲಾಯಿತು.
ಸಭೆಯಲ್ಲಿ ಬಿಜೆಪಿ ಕುಂಬಳೆ ದಕ್ಷಿಣ ವಲಯ ಅಧ್ಯಕ್ಷ ಕೆ. ಸುಜಿತ್ ರೈ, ಉತ್ತರವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ, ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ ಪ್ರದೀಪ್ ಆರಿಕ್ಕಾಡಿ, ಪಂಚಾಯತ್ ಸದಸ್ಯರಾದ ಪ್ರೇಮಲತಾ ಎಸ್., ವಿವೇಕಾನಂದ ಶೆಟ್ಟಿ, ಎಸ್. ಮೋಹನ್ ಬಂಬ್ರಾಣ, ವಿದ್ಯಾ ಎನ್. ಪೈ, ಪ್ರೇಮಾವತಿ, ಸುಲೋಚನ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.