ಕುಂಬ್ಡಾಜೆ: ವೃದ್ದೆ ಸಾವಿಗೀಡಾಗಿರುವುದು ಉಸಿರುಗಟ್ಟಿ ಎಂಬ ಸೂಚನೆ; ಕೃತ್ಯ ನಡೆಸಿದವರು ಯಾರು? ತನಿಖೆ ತೀವ್ರಗೊಳಿಸಿದ ಬದಿಯಡ್ಕ ಪೊಲೀಸ್

ಬದಿಯಡ್ಕ: ಕುಂಬ್ಡಾಜೆ ಮವ್ವಾರು ಅಜಿಲ ಎಂಬಲ್ಲಿನ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ವೃದ್ದೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯಲ್ಲಿ ನಿಗೂಢತೆ ಹುಟ್ಟಿಕೊಂಡಿದೆ. ಇದು ಕೊಲೆ ಕೃತ್ಯವಾಗಿದೆ ಎಂಬ ಅನುಮಾನದ ಮೇರೆಗೆ ಪೊಲೀಸ್ ತನಿಖೆ ಮುಂದುವರಿಯುತ್ತಿದೆ. ಇಂದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಇದರ ವರದಿ ಲಭಿಸಿದ ಬಳಿಕವೇ ಸಾವಿಗೆ ಕಾರಣವೇನೆಂಬ ಬಗ್ಗೆ  ಮಾಹಿತಿ ಲಭಿಸಬಹುದೆಂದು ತನಿಖಾ ತಂಡ ಅಭಿಪ್ರಾಯಪಟ್ಟಿದೆ.

ಮವ್ವಾರು ಅಜಿಲದ ದಿ| ವೆಂಕಪ್ಪ ಶೆಟ್ಟಿಯವರ ಪತ್ನಿ ಪುಷ್ಪಲತಾ ವಿ. ಶೆಟ್ಟಿ (72) ನಿನ್ನೆ ಬೆಳಿಗ್ಗೆ ಮನೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬೆಂಗಳೂರಿನಲ್ಲಿ ವಾಸಿಸುವ ಸಹೋದರಿಯ ಪುತ್ರಿ ವಂಶ (25) ಅವರು ಪುಷ್ಪಲತರ ಸಾವಿಗೆ ಸಂಬಂಧಿಸಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ವಿಷಯ ತಿಳಿದು ಇನ್ಸ್‌ಪೆಕ್ಟರ್ ಎ. ಸಂತೋಷ್ ಕುಮಾರ್, ಎಸ್‌ಐ ಸವ್ಯಸಾಚಿ ಎಂಬಿವರ ನೇತೃತ್ವದಲ್ಲಿ ಪೊಲೀಸರು ತಲುಪಿ ಮನೆಯಲ್ಲಿ ಪರಿಶೀಲಿಸಿದಾಗ  ನೆಲದಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಪ್ರಾಥಮಿಕ ತಪಾಸಣೆಯಲ್ಲಿ ಕುತ್ತಿಗೆ ಹಿಚುಕಿರುವುದಾಗಿ ಅಂದಾಜಿಸಲಾಗಿದೆ. ಮುಖದಲ್ಲಿ ಕಂಡು ಬಂದ ಗಾಯಗಳು ಸಾವಿನ ಬಗ್ಗೆ ನಿಗೂಢತೆಗೆ ಕಾರಣವಾಗಿದೆ. ಸಾವಿನಲ್ಲಿ ಸಂಶಯವಿರುವುದಾಗಿ ಸಂಬಂಧಿಕರು ದೂರು ವ್ಯಕ್ತಪಡಿಸಿದುದರಿಂದ ಮೃತದೇಹದ ಮರಣೋತ್ತರ ಪರೀಕ್ಷೆ  ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಸಲಾಯಿತು.

ಕಳ್ಳರೆಂದು ಭಾವಿಸಲು ನಡೆಸಿದ ಗೂಢ ತಂತ್ರವೆಂದು ಸಂಶಯ

ಪುಷ್ಪಲತರ ಸಾವಿನ ಹಿಂದೆ ಕಳ್ಳರಾಗಿದ್ದಾರೆಂದು ಭಾವಿಸಲು ಗೂಢ ತಂತ್ರ ನಡೆದಿರುವುದಾಗಿಯೂ ಸಂಶಯಿಸಲಾಗುತ್ತಿದೆ.  ಕರಿಮಣಿ ಸರವನ್ನು ಕಳ್ಳರು ಕೊಂಡೊಯ್ದಿರುವುದಾಗಿ ಅಂದಾಜಿಸಲು ಕೂಡಾ ಪ್ರಯತ್ನ ನಡೆದಿರುವುದಾಗಿ ಅಂದಾಜಿಸಲಾಗಿದೆ. ಕಳ್ಳರಾಗಿದ್ದರೆ ಕಪಾಟು ತೆರೆದು ಅದರಲ್ಲಿದ್ದ ಇತರ ಚಿನ್ನಾಭರಣ ಹಾಗೂ ಹಣವನ್ನು ಕೊಂಡೊಯ್ಯುತ್ತಿರಲಿಲ್ಲವೇ ಎಂದು ತನಿಖಾ ತಂಡ ಹಾಗೂ ನಾಗರಿಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಮನೆಯ ಹಿಂಭಾಗದ ಬಾಗಿಲು ತೆರೆದಿರುವುದು ಕೂಡಾ ಸಂಶಯಕ್ಕೆ ಕಾರಣವಾಗಿದೆ. ತನಿಖೆಯ ಅಂಗವಾಗಿ ಸೈಬರ್ ಪೊಲೀಸ್‌ನ ಸಹಾಯ ಯಾಚಿಸಲಾಗಿದೆ.

ನಷ್ಟಗೊಂಡಿರುವುದು ಕರಿಮಣಿ ಸರ ಮಾತ್ರಮನೆಯೊಳಗೆ ಕಪಾಟಿನಲ್ಲಿ ಚಿನ್ನ, ಹಣ

ಹಲವು ವರ್ಷಗಳಿಂದ ಅಜಿಲದ ಹಳೆಯ ಮನೆಯಲ್ಲಿ ಪುಷ್ಪಲತ ಏಕಾಂಗಿಯಾಗಿ ವಾಸಿಸುತ್ತಿದ್ದರು. ಹೆಂಚು ಹಾಸಿದ ಮನೆಯ ಮೇಲ್ಛಾವಣಿಗೆ ಪ್ಲಾಸ್ಟಿಕ್ ಶೀಟ್ ಹೊದಿಸಲಾಗಿದೆ. ದೂರುದಾತೆ ಸಹಿತ ಸಂಬಂಧಿಕರೊಂದಿಗೆ ಪುಷ್ಪಲತ ನಿರಂತರ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಪುಷ್ಪಲತರ ಕುತ್ತಿಗೆಯಿಂದ ಕರಿಮಣಿ ಸರ ಕಾಣೆಯಾಗಿದೆ. ಇದೇ ವೇಳೆ 4ಕ್ಕಿಂತ ಹೆಚ್ಚು ಚಿನ್ನದ ಬಳೆಗಳು ಹಾಗೂ ಹಣ ಮನೆಯೊಳಗಿನ ಕಪಾಟಿನಲ್ಲಿತ್ತು. ಪುಷ್ಪಲತರ ಸಾವಿನ ಹಿಂದೆ ಕಳ್ಳರಾಗಿದ್ದರೆ ಕಪಾಟಿನಲ್ಲಿದ್ದ ಚಿನ್ನ ಹಾಗೂ ಹಣವನ್ನು ಅವರು ಕಳವುಗೈಯ್ಯುತ್ತಿರಲಿಲ್ಲವೇ? ಎಂದು ಸಂಬಂಧಿಕರು ಹಾಗೂ ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಈ ಸಂಶಯ ತನಿಖಾ ತಂಡಕ್ಕೂ ಇದೆ. ತನಿಖೆಯಂಗವಾಗಿ ಸ್ಥಳಕ್ಕೆ ತಲುಪಿದ ಪೊಲೀಸ್ ಶ್ವಾನ ಮನೆಯ ಮುಂಭಾಗದಿಂದ ವಾಸನೆ ಹಿಡಿದ ಬಳಿಕ ಹಿಂಭಾಗದಲ್ಲಿ ತೆರೆದಿಟ್ಟ ಸ್ಥಿತಿಯಲ್ಲಿದ್ದ ಬಾಗಿಲಿನ ಮೂಲಕ ಒಳಗೆ ಪ್ರವೇಶಿಸಿದೆ. ಮೃತದೇಹ ದಿಂದಲೂ ವಾಸನೆ ಹಿಡಿದ ಶ್ವಾನ ಹೊರಗಿಳಿದು ರಸ್ತೆವರೆಗೆ ತಲುಪಿ ಸುಮ್ಮನೆ ನಿಂತುಕೊಂಡಿದೆ. ಯಾರಾದರೂ ಪುಷ್ಪಲತರ ಮನೆಗೆ ಆ ದಾರಿ ಮೂಲಕ ತಲುಪಿರ ಬಹುದೆಂಬ ಸಂಶಯವನ್ನು ಪೊಲೀಸರು ಹೊಂದಿದ್ದಾರೆ.

RELATED NEWS

You cannot copy contents of this page