ಕುಂಬಳೆ: ಐಕ್ಯರಂಗದ 5 ವರ್ಷದ ಆಡಳಿತದಿಂದ ಸ್ಥಳೀಯರಿಗೆ ಕುಂಬಳೆ ಪೇಟೆಗೆ ಪ್ರವೇಶಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆಯೆಂದು ಸಿಪಿಎಂ ಏರಿಯಾ ಕಾರ್ಯದರ್ಶಿ ಸಿ.ಎ. ಸುಬೈರ್ ಆರೋಪಿಸಿದರು. ಕುಂಬಳೆ ಪೇಟೆಯಲ್ಲಿ ನಾಲ್ಕು ಬಸ್ ತಂಗುದಾಣ ಕೇಂದ್ರಗಳನ್ನು ಸ್ಥಾಪಿಸಿ 39 ಲಕ್ಷ ರೂ.ಸ್ವಂತ ಜೇಬಿಗಿಳಿಸಿರುವುದಕ್ಕೆ ಪುರಾವೆ ಪೇಟೆಯ ಹೃದಯ ಭಾಗದಲ್ಲಿ ಮೂಕ ಸಾಕ್ಷಿಯಾಗಿ ನಿಂತಿದೆ. ಸಾವಿರ ಸ್ಕ್ವಾರ್ ಫೀಟ್ ವಿಸ್ತೀರ್ಣವಿರುವ ‘ಟೇಕ್ ಎ ಬ್ರೇಕ್’ನ ಹೆಸರಲ್ಲಿ 39 ಲಕ್ಷ ಗುಳುಂಕರಿಸಲಾಗಿದೆ. ಈ ಕಟ್ಟಡದಲ್ಲಿ ನೀರಿಲ್ಲ, ವಿದ್ಯುತ್ ಇಲ್ಲ. ಈ ಎರಡೂ ಕಟ್ಟಡಗಳ ಉದ್ಘಾಟನೆಯೂ ನಡೆಸಲಾಗಿಲ್ಲ.
ಪಂಚಾಯತ್‌ನಲ್ಲಿರುವ ಒಟ್ಟು ಇಲೆಕ್ಟ್ರಿಕ್ ಕಂಬಕ್ಕಿಂತಲೂ ಹೆಚ್ಚು ಬೀದಿ ದೀಪಗಳನ್ನು ಸ್ಥಾಪಿಸಿರುವುದಾಗಿ ಕಡತದಲ್ಲಿ ಬರೆದಿಟ್ಟು ಎಷ್ಟು ಲಕ್ಷ ರೂ.ವನ್ನು ಜೇಬಿಗಿಳಿಸಿದ್ದಾರೆ ಎಂಬ ಬಗ್ಗೆ ಸುಬೈರ್ ಪ್ರಶ್ನಿಸಿದ್ದಾರೆ. ಕುಂಬಳೆ ಪೇಟೆಯಲ್ಲಿ ಶಾಲೆಗೂ, ಆಸ್ಪತ್ರೆಗೂ ಸಮೀಪದಲ್ಲಿ ಸ್ಥಾಪಿಸಿರುವ ಕಲ್ಯಾಣಮಂಟಪವನ್ನು ತ್ಯಾಜ್ಯ ಕೇಂದ್ರವನ್ನಾಗಿ ಬದಲಿಸಿರುವುದರಿಂದ ದುರ್ವಾಸನೆ ವ್ಯಾಪಿಸಿ ಸ್ಥಳೀಯರಿಗೆ ಈ ಭಾಗದಲ್ಲಿ ನಡೆದಾಡಲು ಕೂಡಾ ಸಾಧ್ಯವಾಗುತ್ತಿಲ್ಲ. ಇದರ ವಿರುದ್ಧ ಆಡಳಿತ ಸಮಿತಿ ಮಾತನಾಡುತ್ತಿಲ್ಲ. ಕುಂಬಳೆ ಪೇಟೆಯ ಟ್ರಾಫಿಕ್ ಪರಿಷ್ಕಾರದಿಂದ ವ್ಯಾಪಾರಿಗಳು, ಜನರು ಸಮಸ್ಯೆಗೀಡಾಗಿದ್ದಾರೆ.ಮೀನು ಮಾರುಕಟ್ಟೆ ಆಧುನಿಕ ರೀತಿಯಲ್ಲಿ ನಿರ್ಮಿಸಿ ಮೀನು ಕಾರ್ಮಿಕರನ್ನು ಬೀದಿಗೆ ತಳ್ಳಿದರು. ಇದೇ ವೇಳೆ ಹೊಸ ಮೀನು ಮಾರುಕಟ್ಟೆಯ ಹೆಸರಲ್ಲಿ ಲಕ್ಷಾಂತರ ರೂ. ಕೊಳ್ಳೆ ಹೊಡೆದಿರುವುದಾಗಿ ಸುಬೈರ್ ಆರೋಪಿಸಿದರು. ಸಾವಿರಾರು ಮಂದಿ ದಿನಂಪ್ರತಿ ಬಂದು ಹೋಗುವ ಕುಂಬಳೆ ಪೇಟೆಯಲ್ಲಿ ಪ್ರಯಾಣಿಕರಿಗೆ ಅನಿವಾರ್ಯವಾದ ಶೌಚಾಲಯ ಕೂಡಾ ಇದುವರೆಗೆ ತೆರೆದುಕೊಡಲಿಲ್ಲ. ಅದೇ ವೇಳೆ ಪ್ರತಿಯೊಂದು ನಿರ್ಮಾಣಗಳ ಹೆಸರಲ್ಲಿ ಲಕ್ಷಾಂತರ ರೂ. ಅಪಹರಿಸಲಾಗುತ್ತಿದೆ. ಟೂರಿಸಂ ವಲಯದಲ್ಲಿ ಕೇರಳ ಮುನ್ನುಗ್ಗುತ್ತಿರುವಾಗ ಕುಂಬಳೆಯ ಟೂರಿಸಂ ವಲಯದಲ್ಲಿ ಕಾಡು ಆವರಿಸುತ್ತಿದೆ. ಪಂಚಾಯತ್‌ನ ಪ್ರಧಾನ ಟೂರಿಸ್ಟ್ ಕೇಂದ್ರವಾಗಿ ಬದಲಾಗಬಹುದಾದ ಆರಿಕ್ಕಾಡಿ ಕೋಟೆಯಲ್ಲಿ ಚಿನ್ನವನ್ನು ಅಗೆದು ತೆಗೆಯಲು ಯತ್ನಿಸಿದ ಆಡಳಿತ ಪಕ್ಷದವರು ಜನರ ಎದುರಲ್ಲಿ ಅಪಹಾಸ್ಯರಾಗುತ್ತಿದ್ದಾರೆ. ಆರಿಕ್ಕಾಡಿಯ ಬಂದರು ಇಲಾಖೆಯ ಹೊಯ್ಗೆ ಕಡವಿನಲ್ಲಿ ಯೂತ್ ಲೀಗ್ ಮುಖಂಡನನ್ನು ನಕಲಿ ಹೊಯ್ಗೆ ಸಂಗ್ರಹ ಕಾರ್ಮಿಕನಾಗಿ ನೋಂ ದಾಯಿಸಿ ಲಕ್ಷಾಂತರ ರೂ.ಗಳ ಹೊಯ್ಗೆ ಸಂಗ್ರಹಿಸಿದ ವಿಷಯದಲ್ಲಿ ಆಡಳಿತ ಪಕ್ಷ ಸಿಲುಕಿಕೊಂಡಿದೆ. ಹೊಯ್ಗೆ ಕ್ಷಾಮ ತೀವ್ರಗೊಂಡು ನಿರ್ಮಾಣ ವಲಯ ಸ್ತಂಭನಾವಸ್ಥೆಯಲ್ಲಿದೆ. ವಿಶ್ವಕ್ಕೆ ಹಾಗೂ ದೇಶಕ್ಕೆ ಮಾದರಿಯಾದ ಲೈಫ್ ಮಿಶನ್‌ನಿಂದ ನಿಜವಾದ ಫಲಾನು ಭವಿಗೆ ಮನೆ ನೀಡುವುದರ ಬದಲಾಗಿ ಸ್ವಂತದವರಿಗೆ, ಸಂಬಂಧಿಕರಿಗೆ ಮನೆಗಳನ್ನು ನೀಡಿದ್ದು, ಬಡವರನ್ನು ವಂಚಿಸಲಾಗುತ್ತಿದೆ. ಪಂಚಾಯತ್ ಶಾಪಿಂಗ್ ಕಾಂಪ್ಲೆಕ್ಸ್ ಮುರಿದು ತೆಗೆದು ವರ್ಷ ೫ ಕಳೆದರೂ ಭರವಸೆಯಿಂದ ಮಾತ್ರ ವ್ಯಾಪಾರಿಗಳನ್ನು ಹಾಗೂ ಉದ್ಯಮಿಗಳನ್ನು ವಂಚಿಸಲಾ ಗುತ್ತಿದೆ. ಕುಂಬಳೆ ಪೇಟೆಯಲ್ಲಿ ಅನಧಿಕೃತ ಕಟ್ಟಡಗಳಿಗೆ ಕಾನೂನು ವಿರುದ್ಧವಾಗಿ ಅನುಮತಿ ನೀಡಿ ಲಕ್ಷಾಂತರರೂ.ಗಳ ಭ್ರಷ್ಟಾಚಾರ ನಡೆಸಲಾಗುತ್ತಿದೆ. ಬಹುಮತವಿಲ್ಲದ ಆಡಳಿತ ಸಮಿತಿಗೆ ಎಸ್‌ಡಿಪಿಐ ಬೆಂಬಲವಾಗಿ ನಿಂತು ಯುಡಿಎಫ್ ಆಡಳಿತ ಸಮಿತಿಯನ್ನು ಹಾಗೂ ಅವರ ಭ್ರಷ್ಟಾಚಾರವನ್ನು ಸಹಿಸಿಕೊಳ್ಳುತ್ತಿದೆ. ಬಿಜೆಪಿ ಅದಕ್ಕೆ ತಾಳಹಾಕುತ್ತಿದೆ. ವಿಶ್ವಕ್ಕೆ, ದೇಶಕ್ಕೆ ಮಾದರಿಯಾದ ಕೇರಳದ ಎಡರಂಗ ಸರಕಾರ ಜ್ಯಾರಿಗೊಳಿಸುವ ಆರೋಗ್ಯ, ಶಿಕ್ಷಣ,ಕಲಾ-ಕ್ರೀಡಾ, ಟೂರಿಸಂ ವಲಯಗಳಲ್ಲಿ ಏನೂ ಮಾಡಲು ಸಾಧ್ಯವಾಗದ ಕುಂಬಳೆ ಪಂಚಾಯತ್ ಆಡಳಿತ ಸಮಿತಿ ಭ್ರಷ್ಟಾಚಾರ ನಡೆಸಿ ಸಾರ್ವಜನಿಕ ಸಂಪತ್ತನ್ನು ಕೊಳ್ಳೆಹೊಡೆದು ಅದನ್ನು ಹಂಚಿಕೊಳ್ಳಲು ಗಲಾಟೆ ಮಾಡುತ್ತಿರುವುದು ಜನರ ಎದುರಲ್ಲಿ ಅವರನ್ನು ಅಪಹಾಸ್ಯರನ್ನಾಗಿ ಮಾಡಿದೆಯೆಂದು ಸುಬೈರ್ ಆರೋ ಪಿಸಿದರು. ಕುಂಬಳೆಯ ಅಭಿವೃದ್ಧಿಗೆ ಹಾಗೂ ಭ್ರಷ್ಟಾಚಾರವನ್ನು ತೊಡೆದು ಹಾಕಲು ಎಡರಂಗದ ಜೊತೆ ಸೇರಲು ಪ್ರಗತಿ ಆಗ್ರಹಿಸುವವರನ್ನು ಸುಬೈರ್ ಆಮಂತ್ರಿಸಿದ್ದಾರೆ.







