ಕಾಸರಗೋಡು: ತೆಂಗಿನ ಮರವೇರುವ ಕಾರ್ಮಿಕರ ಕ್ಷಾಮದಿಂದಾಗಿ ತೆಂಗು ಕೃಷಿಕರು ಭಾರೀ ಸಂಕಷ್ಟವನ್ನು ಎದುರಿಸಬೇಕಾಗಿ ಬಂದಿದೆ. ಮರದಲ್ಲಿರುವ ತೆಂಗಿನಕಾಯಿ ಕೊಯ್ಯಲು ಕಾರ್ಮಿಕರನ್ನು ಹುಡುಕಿಕೊಂಡು ಕೃಷಿಕರು ಅಲೆದಾಡಬೇಕಾದ ಸ್ಥಿತಿ ಉಂಟಾಗಿದೆ. ಕಾರ್ಮಿಕರು ಸಿಕ್ಕಿದರೂ ಪ್ರತೀಯೊಂದು ಮರದಿಂದ ಲಭಿಸುವ ತೆಂಗಿನಕಾಯಿಯ ಬೆಲೆಗಿಂತ ಹೆಚ್ಚು ಮೊತ್ತವನ್ನು ಹಲವರು ವೇತನವಾಗಿ ಕೇಳುತ್ತಿದ್ದಾರೆ. ಹಸಿ ತೆಂಗಿನಕಾಯಿಗೆ ಉತ್ತಮ ಬೆಲೆ ಲಭಿಸುವ ಸಂದರ್ಭದಲ್ಲಿ ತೆಂಗಿನಮರವೇರಲು ಕಾರ್ಮಿಕರು ಸಿಗದಿರುವುದು ಕೃಷಿಕರನ್ನು ತೀವ್ರ ಸಮಸ್ಯೆಯಲ್ಲಿ ಸಿಲುಕಿಸಿದೆ.
ಹಸಿ ತೆಂಗಿನಕಾಯಿ ಕೊಯ್ಯಬೇಕಾದ ಸಮಯದಲ್ಲಿ ಮರವೇರುವ ಕಾರ್ಮಿಕರು ಸಿಗದಿರುವುದರಿಂದ ಮರಗಳಲ್ಲೇ ಕಾಯಿ ಒಣಗಿ ಬೀಳುತ್ತಿದೆ. ಆದರೆ ಆ ತೆಂಗಿನಕಾಯಿಗೆ ಬೆಲೆಯು ಅತ್ಯಲ್ಪವಾಗಿದೆ. ಪರಂಪರಾಗತ ತೆಂಗಿನಮರವೇರುವ ಕಾರ್ಮಿಕರು ಈಗ ಈ ಕೆಲಸ ನಿರ್ವಹಿಸಲು ಹಿಂಜರಿಯುತ್ತಿರುವುದು ಹಾಗೂ ಹೊಸ ತಲೆಮಾರು ಈ ರಂಗಕ್ಕೆ ಬರಲು ಆಸಕ್ತಿ ಹೊಂದದಿರುವುದು ಕಾರ್ಮಿಕರ ಕ್ಷಾಮ ತೀವ್ರಗೊಳ್ಳಲು ಕಾರಣವಾಗಿದೆ. ಈಗಿನ ಲೆಕ್ಕಾಚಾರ ಪ್ರಕಾರ ರಾಜ್ಯದಲ್ಲಿ 15 ಕೋಟಿ ತೆಂಗಿನಮರಗಳಿವೆ ಎಂದು ತೆಂಗು ಅಭಿವೃದ್ಧಿ ಕಾರ್ಪೊರೇಶನ್ ಲೆಕ್ಕ ಹಾಕಿದೆ. ಇದೇ ವೇಳೆ ತೆಂಗಿನ ಮರವೇರುವ ಕಾರ್ಮಿಕರ ಎದುರಾಗಿರುವುದು ಸಮಸ್ಯೆಯುಂಟು ಮಾಡಿದೆ. ಒಂದು ಮರಕ್ಕೆ ಹತ್ತಿದರೆ 50 ರೂ. ಎಂಬ ರೀತಿಯಲ್ಲಿ ಕಾರ್ಮಿಕರು ವೇತನವಾಗಿ ಪಡೆಯುತ್ತಾರೆ. ಈ ಹಿಂದೆ ಇದು 30ರಿಂದ 40 ರೂ. ಆಗಿತ್ತು. ಹಸಿ ತೆಂಗಿನಕಾಯಿಗೆ 80 ರೂ. ಮಾರುಕಟ್ಟೆಯಲ್ಲಿ ಬೆಲೆ ಲಭಿಸುತ್ತಿದ್ದಾಗ ಕಾರ್ಮಿಕರ ವೇತನ 60 ರೂ. ಆಗಿ ಹೆಚ್ಚಳಗೊಂಡಿತು. ಕಾರ್ಮಿಕರ ಕ್ಷಾಮ ಪರಿಹರಿಸಲು ತೆಂಗಿನ ಮರವೇರುವ ಯಂತ್ರ ಉಪಯೋಗಿಸುವ ತರಬೇತಿ ವಿವಿಧೆಡೆ ನಡೆಯುತ್ತಿದೆಯಾದರೂ ಕಾರ್ಮಿಕರು ಲಭಿಸದ ಸ್ಥಿತಿಗೆ ಪರಿಹಾರ ಉಂಟಾಗಿಲ್ಲವೆಂದು ಕೃಷಿಕರು ಹೇಳುತ್ತಿದ್ದಾರೆ.
ತೆಂಗಿನಮರವೇರುವ ಕಾರ್ಮಿಕರಿಗೆ ಸರಕಾರದಿಂದ ಅಗತ್ಯದಷ್ಟು ಸಂರಕ್ಷಣೆ, ಸಹಾಯ ಲಭಿಸದಿರುವುದು ಈ ರಂಗದಲ್ಲಿ ಕೆಲಸ ನಿರ್ವಹಿಸಲು ಜನರು ಹಿಂಜರಿ ಯುತ್ತಿರುವುದಾಗಿ ಹೇಳಲಾಗುತ್ತಿದೆ. ತೆಂಗಿನಮರವೇರುವ ಕಾರ್ಮಿಕರು ಮರದಿಂದ ಬಿದ್ದು ಸಾವಿಗೀಡಾಗುವುದು, ಗಂಭೀರ ಗಾಯಗೊಳ್ಳುವ ಘಟನೆಗಳು ಸಂಭವಿಸುತ್ತಿದೆಯಾದರೂ ಈ ವಿಷಯವನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂಬ ಆರೋಪವೂ ಉಂಟಾಗಿದೆ. ತೆಂಗಿನಮರವೇರುವ ಕಾರ್ಮಿಕರ ಕ್ಷಾಮ ಪರಿಗಣಿಸಿ ತೆಂಗು ಅಭಿವೃದ್ಧಿ ಮಂಡಳಿ ತೆಂಗಿನಮರವೇರುವ ಕಾರ್ಮಿಕರ ಡೈರೆಕ್ಟರಿಯನ್ನು ಸಿದ್ಧಪಡಿಸಿತು. ಇದರಂತೆ ಕಾಸರಗೋಡು ಜಿಲ್ಲೆಯಲ್ಲಿ 1500ಕ್ಕಿಂತಲೂ ಹೆಚ್ಚು ತೆಂಗಿನ ಮರವೇರುವ ಕಾರ್ಮಿಕರಿದ್ದಾರೆಂದು 2015ರಲ್ಲಿ ಪ್ರಕಟಿಸಿದ ಡೈರೆಕ್ಟರಿಯಲ್ಲಿ ತಿಳಿಸಲಾಗಿದೆ. ತೆಂಗಿನ ಮರವೇರುವ ತರಬೇತಿ ಪಡೆಯುವ ಪ್ರತಿಯೊಬ್ಬ ಕಾರ್ಮಿಕನಿಗೆ ಒಂದು ವರ್ಷಕ್ಕೆ ಒಂದು ಲಕ್ಷ ರೂಪಾಯಿಯ ವಿಮೆ ಸಂರಕ್ಷಣೆ ಏರ್ಪಡಿಸುವುದಾಗಿಯೂ ವಿಜ್ಞಾನ ಕೇಂದ್ರದ ಸಹಾಯದೊಂದಿಗೆ ಈ ಯೋಜನೆ ಜ್ಯಾರಿಗೊಳಿಸುವುದಾಗಿ ತೆಂಗು ಅಭಿವೃದ್ಧಿ ಕಾರ್ಪೊರೇಶನ್ ತಿಳಿಸಿತ್ತು.