ಹೊಸಂಗಡಿ: ಜಿಲ್ಲೆಯಲ್ಲೇ ಅತ್ಯಂತ ಹೆಚ್ಚು ಅನಧಿಕೃತ ಸಾಗಾಟವಾಗುತ್ತಿರುವ ಮಾದಕ ಪದಾರ್ಥ, ಕಾಳಧನಗಳನ್ನು ಸೆರೆ ಹಿಡಿಯುವ ಅಬಕಾರಿ ಚೆಕ್‌ಪೋಸ್ಟ್ ಅಸೌಕರ್ಯಗಳ ಕೊರತೆಯಿಂದ ತೊಳಲಾಡುತ್ತಿದೆ. ಕರ್ನಾಟಕದಿಂದ ಬರುವ ವಾಹನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾದಕಪದಾರ್ಥ, ಕಾಳಧನ ಸಾಗಾಟ ನಡೆಯುತ್ತಿದ್ದು, ಇಲ್ಲಿನ ಅಧಿಕಾರಿಗಳು ಇತ್ತೀಚೆಗೆ ವಶಪಡಿಸಿದ ಘಟನೆ ನಡೆದಿತ್ತು. ಆದರೆ ಸ್ಥಳಾವಕಾಶದ ಕೊರತೆ ಸಮಸ್ಯೆಯಾಗುತ್ತಿದೆ.
ಈ ಮೊದಲು ಅಬಕಾರಿ ಚೆಕ್‌ಪೋಸ್ಟ್ ಕಚೇರಿ ವಾಮಂಜೂರು ಹೆದ್ದಾರಿ ಬದಿ ಕಾರ್ಯಾಚರಿಸುತ್ತಿತ್ತು. ಹೆದ್ದಾರಿ ನವೀಕರಣೆ ಕಾಮಗಾರಿ ಆರಂಭಗೊಳ್ಳುವ ಮೊದಲೇ ಈ ಕಚೇರಿಯನ್ನು ಈ ಪರಿಸರದಲ್ಲಿದ್ದ ಮಾರಾಟ ತೆರಿಗೆ ಕಟ್ಟಡ ಬಳಿ ಸ್ಥಳಾಂತರಿಸಲಾಗಿದೆ. ಹೆದ್ದಾರಿ ನಿರ್ಮಾಣವಾದ ಬಳಿಕ ಇಲ್ಲಿ ಮತ್ತೂ ಸ್ಥಳದ ಕೊರತೆ ಉಂಟಾಗಿದೆ. ಈಗ ಹೆದ್ದಾರಿಯಲ್ಲೇ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಬೇಕಾಗುತ್ತಿದೆ. ಮಳೆಯಾದರೂ ಬಿಸಿಲಾದರೂ ಹೆದ್ದಾರಿಯಲ್ಲಿಯೇ ಚೆಕ್‌ಪೋಸ್ಟ್ ಅಧಿಕಾರಿಗಳಿಗೆ ತಪಾಸಣೆ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಅಬಕಾರಿ ಚೆಕ್‌ಪೋಸ್ಟ್‌ಗಾಗಿ ತಲಪಾಡಿಯಲ್ಲಿ ಸುಮಾರು 20 ಸೆಂಟ್ಸ್ ಸ್ಥಳವಿದ್ದರೂ ಇಲ್ಲಿ ಸುಸಜ್ಜಿತ ವ್ಯವಸ್ಥೆಯ ಕಟ್ಟಡ ನಿರ್ಮಾಣಕ್ಕೆ ಇದುವರೆಗೂ ಚಾಲನೆ ನೀಡಲಾಗಿಲ್ಲ. ಪ್ರಸ್ತುತ ಕಬ್ಬಿಣದ ಪೆಟ್ಟಿಗೆಯಲ್ಲಿ ಕಚೇರಿ ಕಾರ್ಯಾಚರಿಸುತ್ತಿದ್ದು, ಉದ್ಯೋಗಿಗಳಿಗೆ ಶೌಚಾಲಯ, ವಾಸಕ್ಕೆ ಕ್ವಾರ್ಟರ್ಸ್‌ಗಳಿಲ್ಲ. ಹೆದ್ದಾರಿಗೆ ದೊಡ್ಡ ಭಿತ್ತಿ ನಿರ್ಮಿಸಿದ ಕಾರಣ ಅತ್ತಿತ್ತ ತೆರಳಲು ಸುತ್ತು ಬಳಸಬೇಕಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗಾಗಿ ವ್ಯವಸ್ಥಿತ ರೀತಿಯ ಅಬಕಾರಿ ಚೆಕ್‌ಪೋಸ್ಟ್ ಕಟ್ಟಡ ನಿರ್ಮಾಣ ಶೀಘ್ರ ಅಗತ್ಯವಿದ್ದು, ಸಂಬಂಧಪಟ್ಟವರು ಇದಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.