ಮನೆಯೊಳಗೆ ಭಾರೀ ಪ್ರಮಾಣದಲ್ಲಿ ಪ್ರಾಚ್ಯವಸ್ತು ಸಂಗ್ರಹ ಮೈಸೂರು ಅರಮನೆಯಿಂದ ಕಳವುಗೈದ ಖಡ್ಗವೂ ಒಳಗೊಂಡ ಶಂಕೆ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಿಕುಳಂನಲ್ಲಿ ಮುಚ್ಚಿದ ಮನೆಯೊಂದರಲ್ಲಿ ಭಾರೀ ಪ್ರಮಾಣದಲ್ಲಿ ಪ್ರಾಚ್ಯವಸ್ತು ಸಂಗ್ರಹ ಪತ್ತೆಹಚ್ಚಲಾಗಿದೆ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಬೇಕಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ.ವಿ. ಶ್ರೀದಾಸ್, ಎಸ್‌ಐ ಸವ್ಯಸಾಚಿ ಎಂಬಿವರ ನೇತೃತ್ವದಲ್ಲಿ ಮನೆಯನ್ನು ತೆರೆದು ಪರಿಶೀಲಿಸಿದಾಗ ಪ್ರಾಚ್ಯ ವಸ್ತು ಸಂಗ್ರಹ ಪತ್ತೆಯಾಗಿದೆ. ಇದರಲ್ಲಿ ಕಂಚಿನ ಪಾತ್ರೆಗಳು, ಕಾಲ್ಗೆಜ್ಜೆಗಳು, ಖಡ್ಗಗಳು ಮೊದಲಾದ ಸಾಮಗ್ರಿಗಳು ಇವೆ. ಕೆಲವು ಸಾಮಗ್ರಿಗಳಲ್ಲಿ ಅರಬೀ ಅಕ್ಷರಗಳನ್ನು ಪತ್ತೆಹಚ್ಚಲಾಗಿದೆ.

ಖಡ್ಗಗಳಲ್ಲಿ ಮೈಸೂರು ಅರಮನೆಯಿಂದ ಕಳವುಗೈದ ಖಡ್ಗವು ಇರುವುದಾಗಿ ಶಂಕಿಸಲಾಗಿದೆ. ಮನೆಗೆ ಹೊಂದಿಕೊಂಡಿರುವ ಒಂದು ಕೊಠಡಿಯ ಅಂಗಡಿಯನ್ನು ಕೂಡಾ ಪೊಲೀಸರು ತೆರೆದು ಪರಿಶೀಲಿಸಿದರು. ಈ ಸಮಯದಲ್ಲಿ ಪ್ರಾಚ್ಯವಸ್ತು ಸಂಗ್ರಹದ ಎಡೆಯಲ್ಲಿ ಹಾವೊಂದು ಅವಿತಿರುವುದನ್ನು ಪೊಲೀಸರು ಕಂಡಿದ್ದಾರೆ. ಇದರಿಂದ  ಪೊಲೀಸರು ಮನೆಗೆ ಮೊಹರು ಹಾಕಿ ತಪಾಸಣೆ ನಿಲ್ಲಿಸಿ ತೆರಳಿದ್ದಾರೆ. ಬಳಿಕ ಪ್ರಾಚ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅವರು ತಲುಪಿದ ಬಳಿಕ ಮುಂದಿನ ತನಿಖೆ ನಡೆಯಲಿದೆ.

You cannot copy contents of this page