ಕುಂಬಳೆ : ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಉಂಟಾದ ತರ್ಕದ ಹೆಸರಲ್ಲಿ ಶಿರಿಯದಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್ ಮಧ್ಯೆ ಘರ್ಷಣೆ ನಡೆದಿದೆ. ನಿನ್ನೆ ರಾತ್ರಿ ನಡೆದ ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಎರಡು ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ.ಇದೇ ವೇಳೆ ಎಲ್‌ಡಿಎಫ್ ಕಾರ್ಯಕರ್ತನನ್ನು ಬಂಧಿಸಲಾಗಿದೆ. ಎರಡೂ ಭಾಗದ ಎರಡು ಕಾರುಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ನಿನ್ನೆ ರಾತ್ರಿ ೮ ಗಂಟೆ ವೇಳೆ ಘರ್ಷಣೆ ಆರಂಭಗೊಂಡಿದೆಯೆಂದು ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಶಿರಿಯ ಮಸೀದಿ ಸಮೀಪ ಕಾರು ನಿಲ್ಲಿಸಿ ಇಳಿದ ಎಲ್‌ಡಿಎಫ್ ಕಾರ್ಯಕರ್ತನಾದ ಶಿರಿಯ ನೌಫಲ್ ಮಂಜಿಲ್‌ನ ಮುಹಮ್ಮದ್ ಇಕ್ಭಾಲ್ (38)ಗೆ ಕಬ್ಬಿಣದ ಸರಳಿನಿಂದ ಹೊಡೆದು, ಕೀಲಿಕೈಯಿಂದ ಇರಿದಿರುವುದಾಗಿ ದೂರಲಾಗಿದೆ. ಈ ಪ್ರಕರಣದಲ್ಲಿ ಸಿದ್ದಿಕ್ ಮುಹಮ್ಮದ್, ಅಶ್ರಫ್ ಅಬ್ದುಲ್ಲ, ಅಬ್ದುಲ್ ಖಾದರ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಇದೇ ವೇಳೆ ರಾತ್ರಿ 8.30ಕ್ಕೆ ಕಾರ್ಯಕರ್ತರಾದ ಶಿರಿಯ ಅಶ್ರಫ್ ಮಂಜಿಲ್‌ನ ಮೊಹಮ್ಮದ್ ಅಶ್ರಫ್ (೪೫), ಕುಂಞಾಲಿ ಮಂಜಿಲ್‌ನ ಅಬೂಬಕರ್ ಸಿದ್ದಿಕ್ ಎಂಬಿವರಿಗೆ ಹಲ್ಲೆಗೈದು ಕಾರಿಗೆ ಮತ್ತೊಂದು ಕಾರನ್ನು ಢಿಕ್ಕಿ ಹೊಡೆಸಿ ಹಾನಿಗೊಳಿಸಲು ಯತ್ನಿಸಲಾಯಿತೆಂಬ ಆರೋಪದಂತೆ ಎಲ್‌ಡಿಎಫ್ ಕಾರ್ಯ ಕರ್ತರಾದ ಶಿರಿಯದ ಇಕ್ಭಾಲ್, ಹಮೀದ್ ಚೋಟು ಎಂಬಿವರ ವಿರುದ್ಧವೂ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಹಮೀದ್ ಚೋಟುವನ್ನು ಬಂಧಿಸಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾರು ಢಿಕ್ಕಿ ಹೊಡೆಸಿದ ಪರಿಣಾಮ ದೂರುಗಾರನ ಕಾರಿಗೆ ೫೦ ಸಾವಿರ ರೂಪಾಯಿಗಳ ನಷ್ಟವುಂಟಾಗಿರುವುದಾಗಿಯೂ ಪ್ರಕರಣದಲ್ಲಿ ತಿಳಿಸಲಾಗಿದೆ.







