ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದ ಎಡರಂಗದ ಜಿಲ್ಲಾ ಮಟ್ಟದ ಚುನಾವಣಾ ಪ್ರಣಾಳಿಕೆಯನ್ನು ನಿನ್ನೆ ಪ್ರೆಸ್‌ಕ್ಲಬ್‌ನಲ್ಲಿ ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ.ವಿ. ಜಯರಾಜನ್ ಬಿಡುಗಡೆಗೊಳಿಸಿದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಶಾಸಕ ಎಂ. ರಾಜಗೋಪಾಲನ್, ಶಾಸಕ ಸಿ.ಎಚ್. ಕುಂಞಂಬು, ಎಡರಂಗ ಜಿಲ್ಲಾ ಸಂಚಾಲಕ ಕೆ.ಪಿ. ಸತೀಶ್ಚಂದ್ರನ್, ಎಡರಂಗ ನೇತಾರರಾದ ಸಿ.ಪಿ. ಬಾಬು, ಬೇಬಿ ಬಾಲಕೃಷ್ಣನ್,ಶಾನವಾಸ್ ಪಾದೂರು, ವಿ.ವಿ. ಕೃಷ್ಣನ್, ಪಿ.ಟಿ.ನಂದಕುಮಾರ್, ಅಸೀಸ್ ಕಡಪ್ಪುರಂ, ಕುರ‍್ಯಾಕೋಸ್ ಪರಂಬಿಲ್, ಕರೀಂ ಚಂದೇರಾ, ಪಿ.ಪಿ. ರಾಜು ಮತ್ತು ಪಿ.ವಿ. ಗೋವಿಂದನ್ ಮೊದಲಾದವರು ಉಪಸ್ಥಿತರಿದ್ದರು. ಚುನಾವಣಾ ಪ್ರಣಾಳಿಕೆಯಲ್ಲಿ ಒಟ್ಟು 83 ಭರವಸೆಗಳನ್ನು ನೀಡಲಾಗಿದೆ. ಸಂತುಷ್ಟ ಗ್ರಾಮಗಳಿಂದ ಆರಂಭಗೊಂಡಿರುವ ರೈಸಿಂಗ್ ಕಾಸರಗೋಡು ಅಭಿವೃದ್ಧಿ ಹಬ್‌ಗಳ ತನಕದ ಭರವಸೆಗಳು ಇದರಲ್ಲಿ ಒಳಗೊಂಡಿದೆ. ಕೃಷಿ, ನೀರಾವರಿ, ಪಶುಸಂಗೋಪನೆ, ಹೈನುಗಾರಿಕಾ ಅಭಿವೃದ್ಧಿ, ಮೀನುಗಾರಿಕೆ, ಉದ್ದಿಮೆ, ಪ್ರವಾಸೋದ್ಯಮ, ನಿವೇಶನ, ಆರೋಗ್ಯ ವಲಯಗಳ ಸರ್ವಾಂಗೀಣ ಅಭಿವೃದ್ಧಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿಭಾಗದವರ ಅಭಿವೃದ್ಧಿ, ಕ್ರೀಡೆ, ಕಲಾ-ಸಾಂಸ್ಕೃತಿಕ, ಪ್ರವಾಸೋದ್ಯಮ ವಲಯಗಳಲ್ಲಿ ಜ್ಯಾರಿಗೊಳಿಸಲಾಗುವ ಯೋಜನೆಗಳ ಮಾಹಿತಿಗಳೂ ಚುನಾವಣಾ ಪ್ರಣಾಳಿಕೆಯಲ್ಲಿ ಒಳಗೊಂಡಿದೆ.







