ಕಾನತ್ತೂರು ಪಯರ್‌ಪಳ್ಳದಲ್ಲೂ ಚಿರತೆ ಶೆಡ್‌ನಲ್ಲಿ ಕಟ್ಟಿಹಾಕಿದ ಸಾಕುನಾಯಿ ಬಲಿ

ಕಾಸರಗೋಡು: ಇರಿಯಣ್ಣಿ, ಪಯದಲ್ಲಿ ಮನೆ ಅಂಗಳಕ್ಕೆ ತಲುಪಿದ ಚಿರತೆ ಸಾಕುನಾಯಿಯನ್ನು ಕೊಂದ ಘಟನೆಯ ಬಳಿಕ ಕಾನತ್ತೂರು ಪಯರ್‌ಪಳ್ಳದಲ್ಲೂ ಚಿರತೆ ಕಂಡು ಬಂದಿದೆ. ನಿನ್ನೆ ರಾತ್ರಿ ಚಿರತೆ ಮನೆ ಸಮೀಪದ ಶೆಡ್‌ನಲ್ಲಿ ಸಂಕೋಲೆಯಲ್ಲಿ ಕಟ್ಟಿಹಾಕಿದ್ದ ಸಾಕುನಾಯಿಯನ್ನು ಕೊಂದು ತಿಂದಿದೆ. ನಿವೃತ್ತ ಆರೋಗ್ಯ ಇಲಾಖೆ ಅಧಿಕಾರಿ ರಾಜನ್‌ರ ಸಾಕು ನಾಯಿಯನ್ನು ಚಿರತೆ ಕೊಂದಿದೆ. ಇಂದು ಬೆಳಿಗ್ಗೆ ಎದ್ದು ನೋಡುವಾಗ ಘಟನೆ ತಿಳಿದು ಬಂದಿರುವುದಾಗಿ ರಾಜನ್ ತಿಳಿಸಿದ್ದಾರೆ.  ಮೂರು ನಾಯಿಗಳನ್ನು ಈ ಮನೆಯಲ್ಲಿ ಸಾಕುತ್ತಿದ್ದಾರೆ. ಇವುಗಳಲ್ಲಿ ಎರಡನ್ನು ಗೂಡಿನೊಳಗೂ, ಒಂದನ್ನು ಮನೆಯಂಗಳ ಬಳಿಯ ಶೆಡ್‌ನಲ್ಲಿ ರಾತ್ರಿ ಕಟ್ಟಿ ಹಾಕಲಾಗುತ್ತದೆ. ಕಬ್ಬಿಣದ ಕಂಬ ಹಾಕಿ ಸಂಕೋಲೆಯಲ್ಲಿ ಬಂಧಿಸಿರುವ ಕಾರಣ ನಾಯಿಯನ್ನು ಅಲ್ಲಿಂದ ಬಿಡಿಸಿಕೊಂಡು ಹೋಗಲು ಸಾಧ್ಯವಾಗದೆ ಚಿರತೆ ಅಲ್ಲಿಯೇ ಕೊಂದು ತಿಂದಿದೆ ಎಂದು ಶಂಕಿಸಿರುವುದಾಗಿ ರಾಜನ್ ತಿಳಿಸಿದ್ದಾರೆ. ಮೂರು ವರ್ಷ ಪ್ರಾಯದ ಗಂಡು ನಾಯಿಯಾಗಿದೆ ಇದು. ಅಲ್ಪ ಕಾಲದ ಬಳಿಕ ಇರಿ ಯಣ್ಣಿ ಹಾಗೂ ಪರಿಸರ ಪ್ರದೇಶಗಳಲ್ಲಿ ಮತ್ತೆ ಚಿರತೆ  ಪ್ರತ್ಯಕ್ಷಗೊಂಡಿರುವುದು ಜನರಲ್ಲಿ ಭೀತಿ ಹೆಚ್ಚಿಸಿದೆ.  ಸೋಮವಾರ ಮುಂಜಾನೆ ಇರಿಯಣ್ಣಿ ಪಯದ ನಿವೃತ್ತ ಅಧ್ಯಾಪಕ ಗಣಪತಿ ಭಟ್‌ರ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಚಿರತೆ ಕೊಂದಿದೆ. ನಾಯಿಯ ಬೊಗಳುವಿಕೆ ಕೇಳಿ ಮನೆಮಂದಿ ಲೈಕ್ ಹಾಕಿದಾಗ ಚಿರತೆ ಪರಾರಿಯಾಗಿದೆ. ಈ ಘಟನೆಯ ಬೆನ್ನಲ್ಲೇ ಪಯರ್‌ಪಳ್ಳದಲ್ಲೂ ಚಿರತೆ ನಾಯಿಮೇಲೆ ದಾಳಿ ನಡೆಸಿದೆ.

RELATED NEWS

You cannot copy contents of this page