ಬೇಡಗಂ ಜನತೆಗೆ ಭೀತಿ ಹುಟ್ಟಿಸಿದ್ದ ಚಿರತೆ ಇನ್ನು ಪುತ್ತೂರ್‌ನ ಮೃಗಾಲಯದಲ್ಲಿ

ಕಾಸರಗೋಡು: ಒಂದೂವರೆ ವರ್ಷ ಕಾಲ ಬೇಡಡ್ಕ ಪಂಚಾಯತ್‌ನ ಜನತೆಗೆ ಭಯ ಹುಟ್ಟಿಸಿದ್ದ ಚಿರತೆ ಇನ್ನು ಮುಂದೆ ಪುತ್ತೂರ್ ಜುವೋಲೋಜಿಕಲ್ ಪಾರ್ಕ್‌ನಲ್ಲಿ ಪ್ರವಾಸಿಗರ ಆಕರ್ಷಣಾಬಿಂದುವಾಗಲಿದೆ. ಗಾಯಗೊಂಡಿದ್ದ ರೆಮೊ ಎಂಬ ಗಂಡು ಚಿರತೆಗೆ ಪಾರ್ಕ್‌ನ ವೆಟರ್ನರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಕೇಂದ್ರ ಮೃಗಾಲಯ ಅಥೋರಿಟಿಯ ಅನುಮತಿ ಪಡೆದ ಬಳಿಕ ಪಾರ್ಕ್‌ಗೆ ಸ್ಥಳಾಂತರಿಸಲಾಗುವುದು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಉದ್ಘಾಟಿಸಿದ ಜುವೋಲೋಜಿಕಲ್ ಪಾರ್ಕ್‌ನಲ್ಲಿರುವ ಮೂರು ಚಿರತೆಗಳ ಪೈಕಿ ಈ ಚಿರತೆಯೂ ಕೂಡಾ ಒಳಗೊಂಡಿದೆ. ಕಳೆದ ಮಾರ್ಚ್ 26ರಂದು ಬೇಡಡ್ಕ ಪಂಚಾಯತ್‌ನ ಕೊಳತ್ತೂರು ಆವಲುಂಗಾಲ್ ಎಂಬಲ್ಲಿಂದ ಅರಣ್ಯ ಇಲಾಖೆ ಬೋನು ಇರಿಸಿ ಈ ಚಿರತೆಯನ್ನು ಸೆರೆ ಹಿಡಿದಿತ್ತು. ಸೆರೆಯಾದ ಈ ಚಿರತೆಯ ದೇಹದಲ್ಲಿ ಗಾಯಗಳು ಕಂಡು ಬಂದಿದ್ದು, ಇದರಿಂದ ಚಿಕಿತ್ಸೆಗಾಗಿ ತೃಶೂರ್‌ನ ಜುವೋಲೋಜಿಕಲ್ ಪಾರ್ಕ್‌ಗೆ ಕೊಂಡೊಯ್ಯಲಾಗಿತ್ತು. ಕಳೆದ ಫೆಬ್ರವರಿ ೫ರಂದು ಕೊಳತ್ತೂರು ಮಡಂದಕ್ಕೋಡ್ ಎಂಬಲ್ಲಿನ ಗುಹೆಯೊಂದರಲ್ಲಿ ಮುಳ್ಳುಹಂದಿಗೆ ಇರಿಸಿದ ಕುಣಿಕೆಯಲ್ಲಿ ಚಿರತೆ ಸಿಲುಕಿತ್ತು. ಇದರಿಂದ ಚಿರತೆಯ ಬಲಕಾಲಿಗೆ ಗಾಯವುಂಟಾಗಿತ್ತು. ಅನಂತರ ಬೋನಿನಲ್ಲಿ ಬಂಧಿಯಾದ ಚಿರತೆ ಪರಾರಿಗೆ ಯತ್ನಿಸಿದಾಗ ಮುಖಕ್ಕೂ ಗಾಯಗಳಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚೀಫ್ ಕನ್ಸರ್ವೇಟರ್‌ರ ಅನುಮತಿ ಪಡೆದು ಜುವೋಲೋಜಿಕಲ್ ಪಾರ್ಕ್‌ಗೆ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿತ್ತು.  ಮಣ್ಣುತ್ತಿ ಮೃಗಾಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ನಡೆಸಿದ ಬಳಿಕ ಕಳೆದ 7 ತಿಂಗಳಿಂದ ಚಿರತೆ ಜುವೋಲೋಜಿಕಲ್ ಪಾರ್ಕ್‌ನ ಮೃಗಾಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ಈಗ ಗಾಯಗಳು ಪೂರ್ಣವಾಗಿ ಒಣಗಿದೆ. ಪಾರ್ಕ್‌ನ ಅಧಿಕಾರಿಗಳೇ ಈ ಚಿರತೆಗೆ ರೆಮೊ ಎಂದು ಹೆಸರಿಟ್ಟಿದ್ದಾರೆ. ಚಿಕಿತ್ಸೆಯ ಸಂದರ್ಭದಲ್ಲಿ ಆಕ್ರಮಣಕಾರಿ ಸ್ವಭಾವ ತೋರಿಸುತ್ತಿದ್ದ ಚಿರತೆ ಇದೀಗ ಸಮಾಧಾನವಾಗಿದೆ ಎನ್ನಲಾಗಿದೆ.

ಈ ಚಿರತೆಗೆ ಸುಮಾರು 6 ವರ್ಷ ಪ್ರಾಯವಿದೆ ಎಂದು ವೈದ್ಯರುಗಳು ಅಂದಾಜಿಸಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ ಬಳಿಕ ಕೇಂದ್ರ ಮೃಗಾಲಯ ಅಥೋರಿಟಿಯ ಅನುಮತಿ ಪಡೆದು ಪಾರ್ಕ್‌ನಲ್ಲಿ ಬಿಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ವಯನಾಡ್‌ನಿಂದ ತಲುಪಿಸಿದ ಒಂದು ಚಿರತೆ ಹಾಗೂ ತೃಶೂರು ಮೃಗಾಲಯದಿಂದ ಸ್ಥಳಾಂತರಿಸಿದ ಚಿರತೆ ಈ ಪಾರ್ಕ್‌ನಲ್ಲಿ ರೆಮೊ ಜೊತೆಗಿರುವುದು. ನಿನ್ನೆ ಉದ್ಘಾಟನೆ ನಡೆದ ಪಾರ್ಕ್ ಮುಂದಿನ ವರ್ಷ ಜನವರಿ ವೇಳೆಗೆ ಸಾರ್ವಜನಿಕರ ಸಂದರ್ಶನಕ್ಕೆ ದೊರಕಿಸಲಾಗುವುದು.

You cannot copy contents of this page