ಕುಂಬಳೆ: ಹಲವು ಅಬಕಾರಿ ಪ್ರಕರಣಗಳಲ್ಲಿ ಆರೋಪಿಯಾದ ಕುಂಬಳೆ ಕುಂಟಂಗೇರಡ್ಕ ಲಕ್ಷ್ಮಿ ನಿವಾಸ್ನ ಪ್ರಭಾಕರನ್ ಯಾನೆ ಅಣ್ಣಿ ಪ್ರಭಾಕರ (52)ನ ಮನೆಯಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಅನಧಿಕೃತವಾಗಿ ಬಚ್ಚಿಡಲಾಗಿದ್ದ ಮದ್ಯ ಪತ್ತೆಹಚ್ಚಲಾಗಿದೆ. ಮನೆಯ ಗೋಡೆ ಕೊರೆದು ಅದರೊಳಗೆ ಬಚ್ಚಿಡಲಾಗಿದ್ದ ಮದ್ಯ ಹಾಗೂ 32,970 ರೂಪಾಯಿಗಳನ್ನು ವಶಪಡಿಸಲಾಗಿದೆ. 180 ಮಿಲ್ಲಿಯ ನಾಲ್ಕು ಬಾಟ್ಲಿ ಗೋವಾ ಮದ್ಯ, 180 ಮಿಲ್ಲಿಯ 52 ಪ್ಯಾಕೆಟ್ ಕರ್ನಾಟಕ ಮದ್ಯವನ್ನು ವಶಪಡಿಸಲಾಗಿದೆ.
ಮನೆಯಲ್ಲಿ ಮದ್ಯ ದಾಸ್ತಾನು ಇರಿಸಲಾಗಿದೆ ಎಂಬ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಪೊಲೀಸ್ ಇನ್ಸ್ಪೆಕ್ಟರ್ ಪಿ.ಕೆ. ಜಿಜೀಶ್ರ ನಿರ್ದೇಶ ಪ್ರಕಾರ ಎಸ್ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸ್ ತಂಡ ನಿನ್ನೆ ಸಂಜೆ 6 ಗಂಟೆಗೆ ಪ್ರಭಾಕರನ ಮನೆಯಲ್ಲಿ ಶೋಧ ಆರಂಭಿಸಿದೆ. ಪೊಲೀಸರನ್ನು ಕಂಡೊಡನೆ ಪ್ರಭಾಕರ ಮನೆಯ ಹಿಂಬಾಗಿಲು ತೆರೆದು ಓಡಿ ಪರಾ ರಿಯಾಗಿದ್ದಾನೆ. ಮನೆಯೊಳಗೆ ಪೊಲೀಸರು ನಡೆಸಿದ ಪರಿಶೀಲನೆಯಲ್ಲಿ ಮದ್ಯ ಪತ್ತೆಹಚ್ಚ ಲಾಗಿರಲಿಲ್ಲ. ರಾತ್ರಿ 1 ಗಂಟೆ ವೇಳೆಗೆ ಗೋಡೆಗೆ ತಾಗಿಸಿಕೊಂಡು ಇರಿಸಿದ್ದ ಕಪಾಟು ತೆರವುಗೊಳಿಸಿ ಪರಿಶೀಲನೆ ನಡೆಸಿದಾಗ ಗೋಡೆ ಕೊರೆದು ಗುಪ್ತ ಸೆರೆ ಸೃಷ್ಟಿಸಿ ಅದರೊಳಗೆ ಮದ್ಯ ಬಚ್ಚಿಟ್ಟಿರುವುದು ಪತ್ತೆ ಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾದ ಆರೋಪಿಗಾಗಿ ತನಿಖೆ ತೀವ್ರಗೊಳಿಸಿರುವು ದಾಗಿಯೂ ಪೊಲೀಸರು ತಿಳಿಸಿದ್ದಾರೆ.