ಬೆಂಗಳೂರು: ನಿನ್ನೆ ನಿಧನ ಹೊಂದಿದ ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪುರಸ್ಕೃತ ದಿಗ್ಗಜ ಎಸ್.ಎಲ್. ಭೈರಪ್ಪ (94)ರಿಗೆ ಚಾಮುಂಡಿ ತಪ್ಪಲಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ. ಸರಕಾರಿ ಗೌರವ ಸಲ್ಲಿಕೆಯೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ, ಕರ್ನಾಟಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಹಿತ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂದು ಮಧ್ಯಾಹ್ನದವರೆಗೆ ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಆ ಬಳಿಕ ಮೈಸೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.
ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದ ಸಾಹಿತಿ ಭೈರಪ್ಪರವರು ನಿನ್ನೆ ಮಧ್ಯಾಹ್ನ ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇವರ ನಿಧನ ಸುದ್ಧಿ ತಿಳಿಯುತ್ತಿದ್ದಂತೆ ಅಭಿಮಾನಿಗಳು, ಆಪ್ತರು ಆಸ್ಪತ್ರೆಯತ್ತ ಧಾವಿಸಿದ್ದಾರೆ. ಮೃತರು ಪತ್ನಿ ಸರಸ್ವತಿ, ಪುತ್ರರಾದ ಎನ್.ಐ.ಇ ಕಾಲೇಜು ಕಾರ್ಯದರ್ಶಿ ಉದಯಶಂಕರ್, ಲಂಡನ್ ನಿವಾಸಿ ರವಿಶಂಕರ್ ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಪಂಪಾ ಪ್ರಶಸ್ತಿ, ಎನ್‌ಟಿಆರ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ವಾಗ್ವಿಲಾಸಿನಿ ಪುರಸ್ಕಾರ, ಡಾ. ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ, ಕ.ಸಾ.ಪ. ನೃಪತುಂಗ ಪ್ರಶಸ್ತಿ, ಕೃಷ್ಣದೇವರಾಯ ಪ್ರಶಸ್ತಿ ಇವರಿಗೆ ಲಭಿಸಿದೆ. ಸರಸ್ವತಿ ಸಮ್ಮಾನ್ ಪ್ರಶಸ್ತಿ ಲಭಿಸಿದ ಮೊದಲ ಕನ್ನಡಿಗರಾಗಿದ್ದು 2016ರಲ್ಲಿ ಪದ್ಮಶ್ರೀ, 2023ರಲ್ಲಿ ಪದ್ಮಭೂಷಣ ಪ್ರಶಸ್ತಿ ಇವರಿಗೆ ಲಭಿಸಿದೆ. ಗುಲ್ಬರ್ಗಾ ವಿವಿಯಿಂದ ಗೌರವ ಡಾಕ್ಟರೇಟ್, ನಾಡೋಜ, ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್, ಕರ್ನಾಟಕ ಕೇಂದ್ರೀಯ ವಿವಿಯಿಂದ ಗೌರವ ಡಾಕ್ಟರೇಟ್ ಇವರಿಗೆ ಲಭಿಸಿದೆ. ಇವರ ಪ್ರಸಿದ್ಧ ಕಾದಂಬರಿಗಳಾದ ಧರ್ಮಶ್ರೀ, ವಂಶವೃಕ್ಷ, ನಾಯಿನೆರಳು, ತಬ್ಬಲಿಯು ನೀನಾದೆ ಮಗನೆ, ಗೃಹಭಂಗ, ಪರ್ವ ಸಹಿತ ಹಲವು ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ. ಕನ್ನಡ ಸಾಹಿತ್ಯ ಕ್ಷೇತ್ರದ ಮೇರು ಸಾಹಿತಿ ಡಾ. ಎಸ್.ಎಲ್. ಭೈರಪ್ಪರ ನಿಧನದಿಂದ ತೀವ್ರ ದುಃಖವಾಗಿದೆ. ಸಾಹಿತ್ಯ, ತತ್ವಜ್ಞಾನ, ಸಂಸ್ಕೃತಿ ಹಾಗೂ ಭೌದ್ಧಿಕ ವಿಚಾರ ಕ್ಷೇತ್ರಗಳಿಗೆ ಅವರ ಕೊಡುಗೆ ಗಮನಾರ್ಹವೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ ಸೂಚಿಸಿದ್ದಾರೆ. ಕನ್ನಡ ಸಾಹಿತ್ಯದ ಶ್ರೇಷ್ಠ ವ್ಯಕ್ತಿಯಾಗಿದ್ದು, ಭಾರತದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ಒಬ್ಬ ಧೀಮಂತ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಖ್ಯಾತ ಕಾದಂಬರಿಕಾರರ ನಿಧನದ ಸುದ್ಧಿ ತಿಳಿದು ಅತೀವ ದುಃಖವುಂಟಾ ಯಿತೆಂದು ಮುಖ್ಯಮಂತ್ರಿ ಸಿದ್ಧರಾ ಮಯ್ಯ ಸಂತಾಪ ವ್ಯಕ್ತಪಡಿಸಿದ್ದು, ಉತ್ಕೃಷ್ಟ ಕಾದಂಬರಿಗಳನ್ನು ನೀಡಿ ಲಕ್ಷಾಂತರ ಓದುಗರ ಮನ ಗೆದ್ದಿದ್ದ ಭೈರಪ್ಪನವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಭರಿಸಲಾಗದ ನಷ್ಟ ಉಂಟು ಮಾಡಿದೆ ಎಂದು ಅವರು ನುಡಿದಿದ್ದಾರೆ.