ಅಂತ್ಯಸಂಸ್ಕಾರಕ್ಕೆ ಸಿದ್ಧತೆ ವೇಳೆ ಉಸಿರಾಟ ಕಂಡುಬಂದ ವ್ಯಕ್ತಿ ಕೊನೆಗೂ ನಿಧನ

ಕುಂಬಳೆ:   ಚಿತೆ ಸಿದ್ದಪಡಿಸಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಂತೆ  ದೇಹ ಕಂಪಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದ ವ್ಯಕ್ತಿ ಮೃತಪಟ್ಟರು. ಕುಂಬಳೆ ಕಂಚಿಕಟ್ಟೆ ರಾಮನಗರದ ರಾಮನಾಥ ಗಟ್ಟಿ (70) ಎಂಬವರು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಇಂದು ಮಧ್ಯಾಹ್ನ ಕುಂಟಂಗೇರಡ್ಕ ಸಾರ್ವಜನಿಕ ಸ್ಮಶಾನದಲ್ಲಿ  ಅಂತ್ಯಸಂಸ್ಕಾರ ನಡೆಯಲಿದೆ.

 ಮಧುಮೇಹ, ರಕ್ತದೊತ್ತಡ ಮೊದಲಾದ ಅಸೌಖ್ಯ ನಿವಾರಣೆಗೆ ಔಷಧಿ ಸೇವಿಸುತ್ತಿದ್ದ ರಾಮನಾಥ ಗಟ್ಟಿಯವರು ಒಂದು ವಾರ ಹಿಂದೆ  ಕುಸಿದು ಬಿದ್ದಿದ್ದರು.  ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರನ್ನು ಪೂರ್ವಸ್ಥಿತಿಗೆ ಮರಳಿಸಲು ಸಾಧ್ಯವಿಲ್ಲ ವೆಂದು ತಿಳಿಸಿ ವೈದ್ಯರು ಮನೆಗೆ ಕಳುಹಿಸಿದ್ದರು. ಆಕ್ಸಿಜನ್ ಮಾಸ್ಕ್  ತೆರವುಗೊಳಿಸಿದರೆ ಉಸಿರಾಟ ನಿಲ್ಲಬಹು ದೆಂದು ತಿಳಿಸಿ  ವೈದ್ಯರು  ರೋಗಿಯನ್ನು ಮನೆಗೆ ಕಳುಹಿಸಿಕೊಟ್ಟಿದ್ದರೆನ್ನಲಾಗಿದೆ. ಆದಿತ್ಯವಾರ ಮನೆಗೆ ತಲುಪಿದ ಬಳಿಕ ಆಕ್ಸಿಜನ್  ಮಾಸ್ಕ್ ತೆರವುಗೊಳಿಸಿದ್ದು, ಅಲ್ಲದೆ ಅಂತ್ಯಸಂಸ್ಕಾರಕ್ಕೆ ಸಿದ್ದತೆಗಳನ್ನು ನಡೆಸಲಾಗಿತ್ತು. ಆದರೆ ಉಸಿರಾಟ ಮುಂದುವರಿದಿದ್ದು, ದೇಹ ಕಂಪಿಸುತ್ತಿದ್ದುದರಿಂದ ಅವರನ್ನು ಆದಿತ್ಯವಾರ ಜನರಲ್ ಆಸ್ಪತ್ರೆಗೆ ತಲುಪಿಸಲಾಗಿತ್ತು. ವೈದ್ಯರು ನಡೆಸಿದ ತಪಾಸಣೆ ವೇಳೆ ಉಸಿರಾಟವಿರುವುದು ಖಚಿತಗೊಂಡಿತ್ತು. ಬಳಿಕ ಐಸಿಯು ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈಮಧ್ಯೆ ನಿನ್ನೆ ರಾತ್ರಿ ನಿಧನ ಸಂಭವಿಸಿದೆ.

 ಮೃತರು ಪತ್ನಿ ರೂಪವತಿ, ಮಕ್ಕಳಾದ ಅನಿಲ್, ಡೆನಿಲ್, ಸಹೋದರ-ಸಹೋದರಿಯರಾದ ಜಯರಾಮ ಗಟ್ಟಿ,ಸುರೇಶ್ ಗಟ್ಟಿ, ರತಿ, ಸಾವಿತ್ರಿ, ಉಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page