ಕಾಸರಗೋಡು: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಳಿಯಾರು ಕಾಟಿಪಳ್ಳದಲ್ಲಿ ಯುವಕನೋರ್ವ ನಿಗೂಢ ರೀತಿಯಲ್ಲಿ ಗುಂಡೇಟು ತಗಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಂಜಕ್ಕಲ್ಲು ಕಾಟಿಪಳ್ಳ ನಿವಾಸಿಯಾದ ಮೊಯ್ದು ಎಂಬವರ ಪುತ್ರ ಹೈದರಲಿ (27) ಮೃತಪಟ್ಟ ವ್ಯಕ್ತಿ. ವಿಷಯ ತಿಳಿದು ಆದೂರು ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದೆ. ಕಾಟಿಪಳ್ಳ ಬೋರ್‌ವೆಲ್ ಸಮೀಪ ದಲ್ಲಿರುವ ಮೈದಾನದಲ್ಲಿ ಹೈದರಲಿ ಸ್ಕೂಟರ್‌ನಿಂದ ಬಿದಿರುವುದನ್ನು ಸ್ನೇಹಿತ ಮುಹಮ್ಮದ್ ರಮೀಸ್ ಕಂಡಿದ್ದಾರೆನ್ನಲಾಗಿದೆ. ಕೂಡಲೇ ಹೈದರಲಿಯನ್ನು ಅಜೀರ್ ಎಂಬವರ ಕಾರಿನಲ್ಲಿ ಚೆರ್ಕಳದ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತು. ವೈದ್ಯರು ನಡೆಸಿದ ತಪಾಸಣೆಯಲ್ಲಿ ಮೃತಪಟ್ಟಿರುವುದಾಗಿ ದೃಢೀಕರಿಸಲಾಗಿದೆ. ಮೈದಾನ ಸಮೀಪದಲ್ಲಿ ಸ್ಕೂಟರ್ ಬಿದ್ದಿರುವ ಸ್ಥಿತಿಯಲ್ಲಿದೆ. ಸಮೀಪದಲ್ಲೇ ಒಂದು ಬಂದೂಕು ಕಂಡುಬಂದಿದೆ. ಬಂದೂಕಿನಿಂದ ಅಕಸ್ಮಾತ್ತಾಗಿ ಗುಂಡು ಸಿಡಿದಿರುವುದು ಹೈದರಲಿ ಗಾಯಗೊಳ್ಳಲು ಕಾರಣವೆಂದು ಸಂಶಯಿಸಲಾಗುತ್ತಿದೆ. ಹೈದರಲಿಯ ಕೆನ್ನೆಗೆ ಗುಂಡೇಟು ತಗಲಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಸರಿಯಾದ ಕಾರಣ ತಿಳಿದುಬರಲಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ. ಬೇಕಲ ಡಿವೈಎಸ್ಪಿ ಕೆ. ವಿನೋದ್ ಕುಮಾರ್ ಇಂದು ಬೆಳಿಗ್ಗೆ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಗಲ್ಪ್‌ನಲ್ಲಿದ್ದ ಹೈದರಲಿ ತಿಂಗಳುಗಳ ಹಿಂದೆ ಊರಿಗೆ ಬಂದಿದ್ದರು.
ಮೃತರು ತಾಯಿ ಜಮೀಲ ಹಾಗೂ ಶಾಫಿ, ಖದೀಜ ಸಹಿತ ಮೂವರು ಸಹೋದರ-ಸಹೋ ದರಿಯರನ್ನು ಅಗಲಿದ್ದಾರೆ.






