ಟೈಲ್ಸ್ ಕೆಲಸಕ್ಕೆ ತಲುಪಿದ ವ್ಯಕ್ತಿ ರೈಲಿನಲ್ಲಿ ಮೊಬೈಲ್‌ಫೋನ್ ಕಳವುಗೈದು ಸೆರೆ

ಕಾಸರಗೋಡು: ರೈಲು ಪ್ರಯಾಣಿಕನ 3೦,೦೦೦ ರೂ. ಮೌಲ್ಯದ ಮೊಬೈಲ್ ಫೋನ್ ಅಪಹರಿಸಿ ಪರಾರಿಯಾದ 19ರ ಹರೆಯದ ಯುವಕ ಸೆರೆಯಾಗಿದ್ದಾನೆ. ಬಿಹಾರ್ ಬಸ್ಗರ ನಿವಾಸಿ ಚಂದ್ರಕುಮಾರ್ (19)ನನ್ನು ಕಾಸರಗೋಡು ರೈಲ್ವೇ ಪೊಲೀಸರು ಸೆರೆ ಹಿಡಿದಿದ್ದಾರೆ. ಮಲಪ್ಪುರಂ ಅಙಾಡಿಪುರಂ ನಿವಾಸಿ ಅಬ್ದುಲ್ ಮಜೀದ್ (64)ರ ಮೊಬೈಲ್ ಫೋನ್ ಈತ ಅಪಹರಿಸಿದ್ದನು. ಕಳೆದ ಆಗಸ್ಟ್ ೨೮ರಂದು ಪ್ರಕರಣ ನಡೆದಿದೆ. ಕಾಸರಗೋಡಿನಿಂದ ತಲಶ್ಶೇರಿಗೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಮಜೀದ್ ಪ್ರಯಾಣಿಸುತ್ತಿದ್ದರು. ರೈಲು ಕಾಞಂಗಾಡ್‌ನಿಂದ ಹೊರಟಾಗ ಜನರಲ್ ಕಂಪಾರ್ಟ್‌ಮೆಂಟ್‌ನ ಕಿಟಿಕಿಯ ಸಮೀಪದ ಸೀಟ್‌ನಲ್ಲಿ ಕುಳಿತಿದ್ದ ಮಜೀದ್‌ರ ಮೊಬೈಲ್ ಫೋನ್ ಅಪಹರಿಸಿ ಓರ್ವ ಪರಾರಿಯಾಗಿದ್ದನು. ಬಳಿಕ ಮಜೀದ್ ಕಲ್ಲಿಕೋಟೆ ರೈಲ್ವೇ ಠಾಣೆಗೆ ತಲುಪಿ ಪೊಲೀಸರಿಗೆ ದೂರು ನೀಡಿದ್ದರು. ಕೇಸನ್ನು ಬಳಿಕ ಕಾಸರಗೋಡು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.

ಕಾಸರಗೋಡು ಪೊಲೀಸರು ನಡೆಸಿದ ತನಿಖೆಯಲ್ಲಿ ಕಳವುಗೈದ ಫೋನ್ ಆರೋಪಿ ಉಪಯೋಗಿಸುತ್ತಿದ್ದಾನೆ ಎಂದು ಸ್ಪಷ್ಟಗೊಂಡಿದೆ. ಅದರಿಂದ ನಡೆಸಿದ ಹುಡುಕಾಟದಲ್ಲಿ ಪಳ್ಳಿಕ್ಕೆರೆ ಮವ್ವಲ್ ಭಾಗದಲ್ಲಿ ಆರೋಪಿ ಇದ್ದಾನೆಂದು ಪತ್ತೆಹಚ್ಚಲಾಗಿದೆ.

ಟೈಲ್ಸ್ ಕೆಲಸಕ್ಕೆ ಆರೋಪಿ ತಲುಪಿದ್ದನು. ಕೊನೆಗೆ ವಿಚಾರಣೆ ಮಧ್ಯೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಅಪಹರಿಸಿದ ಫೋನ್‌ನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ನಿನ್ನೆ ಬೆಳಿಗ್ಗೆ ಪೊಲೀಸರು ವಶಕ್ಕೆ ಪಡೆದ ಆರೋಪಿಯನ್ನು ಸಂಜೆ ವೇಳೆ ಕಾಞಂಗಾಡ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾಸರಗೋಡು ರೈಲ್ವೇ ಎಸ್‌ಐ ಸನಿಲ್ ಕುಮಾರ್, ಎಎಸ್‌ಐ ಪ್ರದೀಪ್ ಕುಮಾರ್, ಸಿಪಿಒಗಳಾದ ಸುಶಾಂತ್, ಜ್ಯೋತಿಷ್ ಎಂಬಿವರ ನೇತೃತ್ವದಲ್ಲಿರುವ ತಂಡ ಆರೋಪಿಯನ್ನು ಸೆರೆ ಹಿಡಿದಿದೆ.

RELATED NEWS

You cannot copy contents of this page