ಮಂಜೇಶ್ವರ: ಮಂಜೇಶ್ವರ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಇದರ 2024-26ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಶೈಕ್ಷಣಿಕ ಸಾಧಕರಿಗೆ ಸನ್ಮಾನ ಮಂಜೇಶ್ವರ ಎಸ್‌ಎಟಿ ಶಾಲಾ ಸಭಾಂಗಣದಲ್ಲಿ ನೆರವೇರಿತು. ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪ್ಲಸ್‌ಟು ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಫಲಕ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಎಸ್. ರಾಮಚಂದ್ರ ‘ಬ್ಯಾಂಕಿನ ಪ್ರತಿಯೊಂದು ಬೆಳವಣಿಗೆಗೆ ಹಾಗೂ ಪ್ರಗತಿಗೆ ಸದಸ್ಯರು ಮತ್ತು ಗ್ರಾಹಕರು ಇಟ್ಟಿರುವ ಅಪಾರ ನಂಬಿಕೆ ಮತ್ತು ನಿರಂತರ ಸಹಕಾರ ಪ್ರಮುಖ ಕಾರಣವಾಗಿದೆ. ಎಂದರು. ಬ್ಯಾಂಕಿನ ಮುಖ್ಯ ಕಾರ್ಯದರ್ಶಿ ಪಿ. ರಾಜನ್ ನಾಯರ್ 2025-26 ಸಾಲಿನ ಆಯ-ವ್ಯಯ ಲೆಕ್ಕಪತ್ರ, ಕರಡು ಬಜೆಟ್ ಹಾಗೂ ವಾರ್ಷಿಕ ವರದಿ ಮಂಡಿಸಿದರು. ಕಳೆದ ಹಲವು ದಶಕಗಳಿಂದ ಬ್ಯಾಂಕ್ ಲಾಭದಾಯಕ ಹಾದಿಯಲ್ಲಿದ್ದು, ಆಡಿಟ್ ಕ್ಲಾಸಿಫಿಕೇಶನ್‌ನಲ್ಲಿ ‘ಎ’ ಗ್ರೇಡ್ ಕಾಯ್ದುಕೊಂಡಿದೆ.1940ರಲ್ಲೇ ಆರಂಭಿಸಿದ ಈ ಸಂಸ್ಥೆಯು ‘ಕ್ಲಾಸ್-೧ ಸೂಪರ್ ಗ್ರೇಡ್’ ಬ್ಯಾಂಕ್ ಆಗಿ ಭದ್ರವಾದ ಅಡಿಪಾಯದೊಂದಿಗೆ ಬೆಳೆದು ಬಂದಿದೆ ಎಂದು ಹೇಳಿದರು.
ಆಡಿಟ್ ಅಸಿಸ್ಟೆಂಟ್ ಡೈರೆಕ್ಟರ್ ಎ. ಜಯಚಂದ್ರನ್ ಮತ್ತು ಜಂಟಿ ನಿರ್ದೇಶಕ ಟಿ.ಎಂ. ಮ್ಯಾಥ್ಯೂ ಅವರ ಆಡಿಟ್ ಪ್ರಮಾಣಪತ್ರದ ಪ್ರಕಾರ ಈ ವರ್ಷ ಬ್ಯಾಂಕ್ ರೂ. 90.88 ಲಕ್ಷ ಅಂತಿಮ ನಿವ್ವಳ ಲಾಭ ಗಳಿಸಿದೆ. ಈ ಸಾಧನೆಗೆ ಸಹಕರಿಸಿದ ಆಡಳಿತ ಮಂಡಳಿ, ನೌಕರ ವೃಂದ, ಸಹಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಹಕರಿಗೆ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ. ಬ್ಯಾಂಕಿನ ನಿರ್ದೇಶಕರಾದ ಡಾ. ಕೆ.ಎ. ಖಾದರ್, ಗಣೇಶ್ ಸಿ.ಎಚ್., ವಾತಿಶ್ ಕೆ., ರಾಮಚಂದ್ರ ಕೆ., ಗಂಗಾಧರ, ಗಂಗಾಧರ ಕೆ.ಎಚ್., ರೇಖಾ, ನಾರಾಯಣಿ ಕೆ. ಹಾಗೂ ಶೇಸಮ್ಮ ಶುಭ ಹಾರೈಸಿದರು. ಶಾಖೆಗಳ ಸಿಬ್ಬಂದಿಗಳು, ಗ್ರಾಹಕರು ಹಾಗೂ ಸದಸ್ಯರು ಭಾಗವಹಿಸಿದ್ದರು.






