ಕಾಸರಗೋಡಿನ ವಸತಿಗೃಹದಿಂದ ಎಂಡಿಎಂಎ ವಶ: ಯುವತಿ, ಸ್ನೇಹಿತನ ಸೆರೆ

ಕಾಸರಗೋಡು: ನಗರದ  ವಸತಿಗೃಹವೊಂದರಿಂದ ಎಂಡಿಎಂಎ ಸಹಿತ ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಬೇಳ ಕಡಂಬಳದ ಶೆರೀಫ (35), ಕಾಞಂಗಾಡ್ ಐಂಙೋತ್ತ್ ಕರುವಳಂ ನಿವಾಸಿ  ಪೂಮಾಡತ್ತ್ ಹೌಸ್‌ನ ಮುಹಮ್ಮದ್ ರಾಫಿ (31) ಎಂಬಿವರನ್ನು ನಾರ್ಕೋಟಿಕ್ ಸೆಲ್, ಡಾನ್ಸಾಫ್ ತಂಡದ ಸಹಾಯದೊಂದಿಗೆ  ನಗರಠಾಣೆ ಎಸ್‌ಐ ಪಿ.ವಿ.ಮನು ಹಾಗೂ ತಂಡ ಬಂಧಿಸಿದೆ.  ನಿನ್ನೆ   ಅಪರಾಹ್ನ ೩ ಗಂಟೆಗೆ ಪೊಲೀಸರು ವಸತಿಗೃಹಕ್ಕೆ ದಾಳಿ ನಡೆಸಿದ್ದಾರೆ. ವಸತಿಗೃಹಕ್ಕೆ ಮಾದಕವಸ್ತು ಸಹಿತ ತಂಡವೊಂದು ತಲುಪಿದೆಯೆಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಯುವತಿಯ ಪ್ಯಾಂಟ್‌ನ ಜೀಬಿನಲ್ಲಿ ಸಿಪ್ ಲಾಕ್ ಕವರಿನಲ್ಲಿರಿಸಿದ್ದ ೦.೫೩ ಗ್ರಾಂ ಎಂಡಿಎಂಎ ಪತ್ತೆಹಚ್ಚಲಾಗಿದೆ.

 ಬಾಗಿಲಿನ ಬೆಲ್ ಹೊಡೆದಾಗ ಜೊತೆಗಿದ್ದ ರಾಫಿ ಇದನ್ನು ಜೇಬಿಗೆ ಹಾಕಿದ್ದಾನೆಂದು ತಿಳಿಸಿ ಯುವತಿ  ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು. ಬಳಿಕ ಮಾದಕವಸ್ತು ಎಲ್ಲಿಂದ ಲಭಿಸಿದೆಯೆಂದು ಪೊಲೀಸರು ಪ್ರಶ್ನಿಸಿದಾಗ ಮಾಂಙಾಡ್ ನಿವಾಸಿ ಅನಸ್ ಎಂಬಾತನಿಂದ ೩೦೦೦ ರೂಪಾಯಿಗೆ ಖರೀದಿಸಿರುವುದಾಗಿ ರಾಫಿ ತಿಳಿಸಿದ್ದಾನೆ. ಇದರಿಂದ ಈ ಇಬ್ಬರ ವಿರುದ್ಧ ಕೇಸು ದಾಖಲಿಸಿ ಕೊಂಡ ಪೊಲೀಸರು ವಸತಿಗೃಹದ ಕೊಠಡಿಯಲ್ಲಿದ್ದ ಪಾಸ್‌ಪೋರ್ಟ್, ೫ ಮೊಬೈಲ್ ಫೋನ್‌ಗಳು, ಹಣ ಮೊದಲಾದವುಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಸತಿಗೃಹಕ್ಕೆ ದಾಳಿ ನಡೆಸಿದ ಬೆನ್ನಲ್ಲೇ ಯುವತಿ ವಾಸಿಸುವ ಕುಣಿಯದ ಕ್ವಾರ್ಟರ್ಸ್ ನಲ್ಲೂ ಪೊಲೀಸರು ತಪಾಸಣೆ ನಡೆಸಿದ್ದಾರೆ. ಅಲ್ಲಿಂದ ಖಾಲಿ ಕವರ್‌ಗಳು ಮಾತ್ರವೇ ಲಭಿಸಿದೆ. ರಾಫಿ ವಿರುದ್ಧ ಚಂದೇರ, ಕುಂಬಳೆ ಠಾಣೆಗಳಲ್ಲೂ ಕೇಸು ಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಡಾನ್ಸಾಪ್ ಟೀಂ ಸದಸ್ಯರು ಹಾಗೂ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ವಿಜೇಶ್, ಶಿಜು, ಸಿಪಿಒ ಸಿನಿ ಮೋನ್, ಜೇಮ್ಸ್ ಎಂಬಿವರು ದಾಳಿ ನಡೆಸಿದ ತಂಡದಲ್ಲಿದ್ದರು.

You cannot copy contents of this page