ಕಾಸರಗೋಡು: ಮಧ್ಯರಾತ್ರಿ ವೇಳೆ ಹೊಯ್ಗೆ ಬೇಟೆಗೆ ತಲುಪಿದ ಪೊಲೀಸ್ ಹೊಳೆಯಲ್ಲಿ ದೋಣಿಯಿಂದ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಹೊಳೆ ನೀರಿನಲ್ಲಿ ನಿಲ್ಲಿಸಿದ್ದ ದೋಣಿ ಮೇಲೆ ಪೊಲೀಸ್ ಹತ್ತಿ ತಪಾಸಣೆ ನಡೆಸುತ್ತಿದ್ದ ವೇಳೆ ಅದು ಮುಂದೆ ಸಾಗಿದ್ದು, ಇದರಿಂದ ನೀರಿಗೆ ಜಿಗಿದು ಅಪಾಯದಿಂದ ಪಾರಾಗುತ್ತಿದ್ದಂತೆ ಅವರು ಗಾಯ ಗೊಂಡಿದ್ದಾರೆ. ಕಾಸರಗೋಡು ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಚಂದ್ರಗಿರಿ ಹೊಳೆಯಿಂದ ಹೊಯ್ಗೆ ಸಂಗ್ರಹ ನಡೆಯುತ್ತಿದೆ ಯೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಓರ್ವ ಎಸ್.ಐ. ನೇತೃತ್ವದಲ್ಲಿ ಪೊಲೀಸರು ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿದ್ದರು. ಪೊಲೀಸರನ್ನು ಕಂಡೊಡನೆ ಹೊಯ್ಗೆ ಸಂಗ್ರಹ ನಡೆಸುತ್ತಿದ್ದ ತಂಡ ದೋಣಿಯನ್ನು ಹೊಳೆ ಬದಿ ನಿಲ್ಲಿಸಿ ಪರಾರಿಯಾಗಿತ್ತು. ಹೊಯ್ಗೆ ಸಂಗ್ರಹ ತಂಡ ದೋಣಿಯಲ್ಲಿ ಅಡಗಿರಬಹು ದೆಂದು ಭಾವಿಸಿ ಪೊಲೀಸ್‌ನೋರ್ವ ದೋಣಿಗೆ ಹತ್ತಿದ್ದು, ಈ ವೇಳೆ ದೋಣಿ ನೀರಿನಲ್ಲಿ ತೇಲಿ ಹೋಗತೊಡಗಿತ್ತು. ಇದರಿಂದ ಅಪಾಯ ತಪ್ಪಿಸಲು ಪೊಲೀಸ್ ಹೊಳೆಗೆ ಜಿಗಿದು ಈಜಿ ದಡ ಸೇರಿದ್ದಾರೆ. ದೋಣಿಯಿಂದ ಜಿಗಿಯುವ ವೇಳೆ ಪೊಲೀಸ್‌ನ ಕಾಲಿಗೆ ಗಾಯಗಳುಂಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು.