ಕಾಸರಗೋಡು: ಚಟ್ಟಂಚಾಲ್ ಸಮೀಪದ ಬೆಂಡಿಚ್ಚಾಲ್‌ನಿಂದ ನಾಪತ್ತೆಯಾದ ಯುವಕನ ಮೃತದೇಹ ಚಂದ್ರಗಿರಿ ಹೊಳೆಯಲ್ಲಿ ತಳಂಗರೆ ಸೇತುವೆ ಸಮೀಪ ಪತ್ತೆಯಾಗಿದೆ. ಎಯ್ಯಳದ ದಿ| ಅಬ್ದುಲ್ಲ ಕುಂಞಿಯವರ ಪುತ್ರ ನಿಸಾರ್ (47) ಮೃತಪಟ್ಟ ವ್ಯಕ್ತಿ. ಕಳೆದ ಶನಿವಾರ ಮಧ್ಯಾಹ್ನ ಆಹಾರ ಸೇವಿಸಿ ಮನೆಯಿಂದ ಹೊರಗೆ ಹೋದ ನಿಸಾರ್ ಮರಳಿ ಬಂದಿರಲಿಲ್ಲ. ಈ ಬಗ್ಗೆ ಸಹೋದರಿಯ ಪತಿ ಅಬ್ದುಲ್ ಖಾದರ್ ಎಂಬವರು ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ಆದಿತ್ಯವಾರ ರಾತ್ರಿ ೧೦ ಗಂಟೆ ವೇಳೆ ಮೃತದೇಹ ಪತ್ತೆಯಾಗಿದೆ. ನಾಗರಿಕರು ಹಾಗೂ ಪೊಲೀಸರು ಸೇರಿ ಮೃತದೇಹವನ್ನು ಹೊಳೆಯಿಂದ ಮೇಲಕ್ಕೆತ್ತಿ ಜನರಲ್ ಆಸ್ಪತ್ರೆಗೆ ತಲುಪಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಿಸಾರ್ ನಿರ್ಮಾಣ ಕಾರ್ಮಿಕನಾಗಿದ್ದರು. ಮೃತರು ತಾಯಿ ರುಖಿಯ, ಪತ್ನಿ ಆಮಿನ, ಮಕ್ಕಳಾದ ಮರುವಾನ್, ಲದೀಬ್, ಸಿನಾನ್, ಫಿದ, ಸಹೋದರರಾದ ಮುಹಮ್ಮದ್ ಕುಂಞಿ, ಹಸೈನಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವೆ ಸಹೋದರಿ ಆಯಿಷಾ ಈ ಹಿಂದೆ ನಿಧನರಾಗಿದ್ದಾರೆ.







