ಬಾಯಾರು: ನಿರ್ಮಾಣ ಪೂರ್ತಿಗೊಂಡು ಒಂದೂವರೆ ವರ್ಷ ಕಳೆದರೂ ಉದ್ಘಾಟನೆ ನಡೆಸದ ಪೈವಳಿಕೆ ಪಂಚಾಯತ್ ಕುಟುಂಬ ಆರೋಗ್ಯ ಕೇಂದ್ರದ ಹೊಸ ಕಟ್ಟಡವನ್ನು ಬಿಜೆಪಿ ಅಣಕು ಉದ್ಘಾಟನೆ ನಡೆಸಿದೆ. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಈ ಕಾರ್ಯ ನೆರವೇರಿಸಿದರು. ಪೈವಳಿಕೆ ಪಂಚಾಯತ್ ನೋರ್ತ್, ಸೌತ್ ಏರಿಯಾ ಸಮಿತಿಗಳ ಜಂಟಿ ಆಶ್ರಯದಲ್ಲಿ ಬಾಯಾರು ಸೇವಾ ಸಹಕಾರಿ ಬ್ಯಾಂಕ್ ಪರಿಸರದಿಂದ ಮೆರವಣಿಗೆ ಮೂಲಕ ತಲುಪಿ ಅಣಕು ಉದ್ಘಾಟನೆ ನೆರವೇರಿಸಲಾಗಿದೆ.
ಆರೋಗ್ಯ ವಲಯದಲ್ಲಿ ಬಹಳ ಸಂದಿಗ್ಧತೆ ಎದುರಿಸುತ್ತಿರುವ ಜಿಲ್ಲೆಯ ಜನಸಾಮಾನ್ಯರ ವಿರುದ್ಧ ಸವಾಲಾಗಿದೆ, ನಿರ್ಮಾಣ ಪೂರ್ತಿಯಾದರೂ ಹೊಸ ಕಟ್ಟಡವನ್ನು ಉದ್ಘಾಟನೆಗೊಳಿಸದಿರುವ ಸರಕಾರದ ಕ್ರಮವೆಂದು ಅಶ್ವಿನಿ ಅಭಿಪ್ರಾಯಪಟ್ಟರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಇತರ ಕೇಂದ್ರ ಸಚಿವರು ಯೋಜನೆಗಳ ಉದ್ಘಾಟನೆ ಅನ್‌ಲೈನ್ ಮೂಲಕ ನಡೆಸುತ್ತಿರುವಾಗ ಕುಟುಂಬ ಆರೋಗ್ಯ ಕೇಂದ್ರವೊಂದರ ಕಟ್ಟಡ ಉದ್ಘಾಟನೆಗೆ ರಾಜ್ಯ ಸಚಿವರ ಸಮಯಾವಕಾಶಕ್ಕಾಗಿ ಕಾಯಬೇಕಾದ ದುಸ್ಥಿತಿ ಪೈವಳಿಕೆ ಪಂಚಾಯತ್‌ನ ಜನರಿಗಿದ್ದು, ಈ ಅಹಂಭಾವವನ್ನು ಸಹಿಸಲಾಗದು ಎಂದು ಅವರು ನುಡಿದರು.
ಜಿಲ್ಲೆಯ ಜನರು ಎಲ್ಲದಕ್ಕೂ ಮಂಗಳೂರನ್ನು ಆಶ್ರಯಿಸುತ್ತಿದ್ದಾರೆ ಎಂಬ ಶಾಸಕ ಎ.ಕೆ.ಎಂ. ಅಶ್ರಫ್‌ರ ಹೇಳಿಕೆ ಅಪಹಾಸ್ಯಕರವೆಂದು ಪ್ರಧಾನ ಭಾಷಣ ಮಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ನುಡಿದರು. ಕಾಸರಗೋಡು, ಮಂಜೇಶ್ವರ ವಿಧಾನ ಸಭಾ ಮಂಡಲಗಳನ್ನು ದಶಕಗಳಿಂದ ಪ್ರತಿನಿಧೀಕರಿಸುವ ಮುಸ್ಲಿಂಲೀಗ್ ಹಾಗೂ ಯುಡಿಎಫ್ ಈ ಮಂಡಲದ ಮೂಲಭೂತ ಸೌಕರ್ಯ ಅಭಿವೃದ್ಧಿ ಖಚಿತಪಡಿಸುವುದರಲ್ಲಿ ಪರಾಭವಗೊಂಡಿದೆಯೆಂಬುದಕ್ಕೆ ಪುರಾವೆಯಾಗಿದೆ ಈ ಹೇಳಿಕೆ ಎಂದು ಸುನಿಲ್ ನುಡಿದರು. ಪೈವಳಿಕೆ ಸೌತ್ ಏರಿಯಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಪ್ರಧಾನ ಕಾರ್ಯದರ್ಶಿಗಳಾದ ಕೆ.ವಿ. ಭಟ್, ಯತಿರಾಜ್ ಶೆಟ್ಟಿ, ಮಂಡಲ ಕಾರ್ಯದರ್ಶಿ ಗಣೇಶ್ ಪ್ರಸಾದ್, ನೋರ್ತ್ ಏರಿಯಾ ಸಮಿತಿ ಅಧ್ಯಕ್ಷ ಸತ್ಯಶಂಕರ ಭಟ್, ವರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ಭಾಸ್ಕರ ಪೊಯ್ಯೆ, ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ ಚಂದ್ರಾವತಿ ಶೆಟ್ಟಿ, ಜನಪ್ರತಿನಿಧಿಗಳಾದ ಜಯಲಕ್ಷ್ಮಿ ಭಟ್, ರಾಜೀವಿ ಶೆಟ್ಟಿಗಾರ್, ಪ್ರಸಾದ್ ರೈ, ಸದಾಶಿವ ಚೇರಾಲ್, ಪ್ರವೀಣ್ ಪೆರ್ವೋಡಿ, ಜಯಶಂಕರ ಮುನ್ನೂರು, ಕೀರ್ತಿ ಭಟ್ ನೇತೃತ್ವ ನೀಡಿದರು.