ಕುಂಬಳೆ: ಎಲ್ಲಾ ಕುಟುಂಬಗಳಿಗೂ ಮೂಲಭೂತ ಸೌಕರ್ಯಗಳ ಜೊತೆಗೆ ಆರ್ಥಿಕ ಸೌಲಭ್ಯಗಳು ಲಭಿಸುತ್ತಿದೆ ಎಂದು ಖಚಿತಪಡಿಸುವ ಮೂಲಕ ಭಾರತದ ಕೋಟ್ಯಂತರ ಜನ ಸಾಮಾನ್ಯರ ಜೀವನ ಮಟ್ಟವನ್ನು ನರೇಂದ್ರ ಮೋದಿ ಸರಕಾರ ಹೆಚ್ಚಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಮಹಿಳಾ ಮೋರ್ಛಾ ಕುಂಬಳೆ ಪಂಚಾಯತ್ ಮಹಿಳಾ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇರಳಕ್ಕೆ ಸಹಾಯ ಮಾಡಲು ಕೇಂದ್ರ ಸರಕಾರ ಸಿದ್ಧವಾಗಿದ್ದರೂ ಕೂಡಾ ಅದನ್ನು ಪ್ರಯೋಜನಪಡಿಸುವಲ್ಲಿ, ಕೇಂದ್ರದ ಜನಕ್ಷೇಮ ಯೋಜನೆಗಳನ್ನು ಕೇರಳದಲ್ಲಿ ಜ್ಯಾರಿಗೊಳಿಸುವುದರಲ್ಲಿ ಪಿಣರಾಯಿ ವಿಜಯನ್ ಸರಕಾರಕ್ಕೆ ಸಾಧ್ಯವಾಗಿಲ್ಲವೆಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ನುಡಿದರು.
ಐಕ್ಯರಂಗದ ಶಾಸಕರು ಮಂಜೇಶ್ವರ, ಕಾಸರಗೋಡು ಮಂಡಲಗಳಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ಆರೋಗ್ಯ, ಶಿಕ್ಷಣ, ಉದ್ಯೋಗ ವಲಯಗಳಲ್ಲಿ ಕಾಸರಗೋಡಿನ ಜನತೆ ಈಗಲೂ ಕರ್ನಾಟಕವನ್ನು ಆಶ್ರಯಿಸಬೇಕಾದ ಅವಸ್ಥೆ ಇದೆ ಎಂದು ಅವರು ನುಡಿದರು. ಕನ್ನಡ ಭಾಷೆಯವರ ಭಾಷಾಪರವಾದ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯವಾಗಿಲ್ಲ ಮಾತ್ರವಲ್ಲ, ಮಲೆಯಾಳ ಕಡ್ಡಾಯ ಮಸೂದೆಯಲ್ಲಿ ಕಾಸರಗೋಡು, ಮಂಜೇಶ್ವರ ತಾಲೂಕುಗಳ ಜನರಿಗೆ ರಿಯಾಯಿತಿ ಆಗ್ರಹಿಸಲು ಕೂಡಾ ಲೀಗ್ ಶಾಸಕರು ಸಿದ್ಧರಾಗಿಲ್ಲವೆಂದು ಸುರೇಂದ್ರನ್ ಆರೋಪಿಸಿದರು. ಮಹಿಳಾ ಮೋರ್ಛಾ ಕುಂಬಳೆ ಪಂಚಾಯತ್ ಸಮಿತಿ ಅಧ್ಯಕ್ಷೆ ಶಾರದ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಕೆ.ಎಸ್. ರಮಣಿ, ಅನಿತಾ ನಾಯ್ಕ್, ಪ್ರೇಮಲತ ಎಸ್, ಸುನಿಲ್ ಅನಂತಪುರ, ಸುಜಿತ್ ರೈ, ಶಿವಪ್ರಸಾದ್ ರೈ, ಪ್ರೇಮಾವತಿ ಶೆಟ್ಟಿ, ವಿದ್ಯಾ ಎನ್. ಪೈ, ಪ್ರೇಮಾ ವಿ. ಶೆಟ್ಟಿ, ಅಮಿತ ಆಳ್ವ ಮಾತನಾಡಿದರು.






