ಕಾಸರಗೋಡು: ಹಳದಿ ಕಾಮಾಲೆ ತಗಲಿದ ಹಿನ್ನೆಲೆಯಲ್ಲಿ ಕರುಳು ಬದಲಾವಣೆ ಶಸ್ತ್ರಚಿಕಿತ್ಸೆಗಾಗಿ ಎರ್ನಾಕುಳಂನ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ 17ರ ಹರೆಯದ ಯುವಕ ಮೃತಪಟ್ಟನು. ಮೊಗ್ರಾಲ್ ನಡ್ಪಳ್ಳಂ ಸಲಾಮತ್‌ನಗರ್ ನಿವಾಸಿ ಫೈಸಲ್ ಇಂದು ಮುಂಜಾನೆ ಮೃತಪಟ್ಟಿದ್ದಾನೆ. ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನ ಪ್ಲಸ್ ವನ್ ವಿದ್ಯಾರ್ಥಿಯಾಗಿದ್ದಾನೆ. ಮೂರು ತಿಂಗಳ ಜ್ವರ ತಗಲಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದು, ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ತಪಾಸಣೆಯಲ್ಲಿ ಕರುಳಿಗೆ ರೋಗ ತಗಲಿರುವುದನ್ನು ಪತ್ತೆಹಚ್ಚಲಾಗಿತ್ತು.
ಅದಕ್ಕಾಗಿ ಕರುಳು ಬದಲಾವಣೆ ನಡೆಸಬೇಕೆಂದು ವೈದ್ಯರು ನಿರ್ದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಊರವರು ಸೇರಿ ೨೦ ಲಕ್ಷಕ್ಕೂ ಅಧಿಕ ರೂ.ವನ್ನು ಚಿಕಿತ್ಸೆಗಾಗಿ ಸಂಗ್ರಹಿಸಿದ್ದರು. ಈ ಮಧ್ಯೆ ಸಾವು ಸಂಭವಿಸಿದೆ. ಹಂಸ-ಫಾತಿಮ ದಂಪತಿ ಪುತ್ರನಾದ ಈತ ಸಹೋದರ ಸಹೋದರಿಯರಾದ ಸವಾದ್, ಶಬಾನ, ತಸ್ನಿ, ಶಾಜಿ, ಶಂಸು, ಶಾಹಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ. ಮೃತದೇಹವನ್ನು ಊರಿಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಗುವುದು.







