ಕಾಸರಗೋಡು: ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನ ಅಭಿವೃದ್ಧಿ ಫಂಡ್‌ನಿಂದ ಸುಮಾರು ೩೪ ಲಕ್ಷ ರೂಪಾಯಿ ಆರ್ಥಿಕ ಅವ್ಯವಹಾರ ನಡೆಸಲಾಗಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ವಿಜಿಲೆನ್ಸ್ ತಂಡ ನಿನ್ನೆ ಶಾಲೆಗೆ ತಲುಪಿ ತನಿಖೆ ಆರಂಭಿಸಿದೆ. ಡಿವೈಎಸ್‌ಪಿ ಉಣ್ಣಿಕೃಷ್ಣನ್‌ರ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಈ ಹಿಂದಿನ ಹೈಯರ್ ಸೆಕೆಂಡರಿ ಪ್ರಿನ್ಸಿಪಾಲ್ ಇನ್‌ಚಾರ್ಜ್ ಅನಿಲ್ ಹಣಕಾಸು ಅವ್ಯವಹಾರ ನಡೆಸಿರುವುದಾಗಿ ವಿಜಿಲೆನ್ಸ್ ನಡೆಸಿದ ತನಿಖೆಯಲ್ಲಿ ಸ್ಪಷ್ಟಗೊಂಡಿರುವುದಾಗಿ ಮಾಹಿತಿಯಿದೆ. ಶಾಲಾ ಪಿಟಿಎ ಕುಂಬಳೆ ಪೊಲೀಸ್, ವಿಜಿಲೆನ್ಸ್ ಹಾಗೂ ಡಿಡಿಇಗೆ ಈ ಬಗ್ಗೆ ದೂರು ನೀಡಿತ್ತು. ಶಾಲೆಗೆ ಮಂಜೂರು ಮಾಡಿದ 33.5 ಲಕ್ಷ ರೂಪಾಯಿ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಶಾಲೆಯ ತರಗತಿ ಕೊಠಡಿ ನಿರ್ಮಾಣಕ್ಕಾಗಿ ಉದ್ಯೋಗ ಕೋರ್ಸ್ ಸಹಿತ ಅಭಿವೃದ್ಧಿ ಯೋಜನೆಗಾಗಿ ಮಂಜೂರು ಮಾಡಿದ ಲಕ್ಷಾಂತರ ರೂಪಾಯಿಗಳನ್ನು ಅಪಹರಿಸಿರುವುದಾಗಿ ಆರೋಪ ಕೇಳಿ ಬಂದಿದೆ. ಎರಡು ವರ್ಷಗಳ ಹಿಂದೆ ಅನಿಲ್ ಶಾಲೆಯಲ್ಲಿ ಅಧ್ಯಾಪಕನಾಗಿ ಸೇರಿದ್ದರು. ಈ ವರ್ಷ ಇವರು ಮಲಪ್ಪುರಂಗೆ ವರ್ಗಾವಣೆಗೊಂಡು ತೆರಳಿದ್ದಾರೆ. ಅನಂತರ ಜವಾಬ್ದಾರಿ ವಹಿಸಿಕೊಂಡ ಅಧ್ಯಾಪಕ ಹಣ ಅವ್ಯವಹಾರ ನಡೆದಿರುವುದನ್ನು ಪತ್ತೆಹಚ್ಚಿದ್ದರು.







