ಕೊಚ್ಚಿ: ಸಿಎಂಆರ್‌ಎಲ್-ಎಕ್ಸಾಲೋಜಿಕ್ ಸಂಸ್ಥೆ ನಡುವೆ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅಳಿಯ ಮಾಜಿ ಸಚಿವ ಮುಹಮ್ಮದ್ ರಿಯಾಸ್‌ರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ರಾಜ್ಯ ಹೈಕೋರ್ಟ್ ಮಹತ್ವದ ನಿರ್ದೇಶ ನೀಡಿದೆ. ಜಸ್ಟೀಸ್ ಎ. ಖಮರುದ್ದೀನ್‌ರ ನೇತೃತ್ವದ ಹೈಕೋರ್ಟ್‌ನ ಏಕ ಸದಸ್ಯ ಪೀಠ ಈ ನಿರ್ದೇಶ ನೀಡಿದೆ.
ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಪಿಣರಾಯಿ ವಿಜಯನ್ ಸೇರಿದಂತೆ ಇತರರ ವಿರುದ್ಧ ಸರಕಾರ ಪ್ರಕರಣ ದಾಖಲಿಸಿಕೊಳ್ಳದಿರುವುದನ್ನು ಪ್ರಶ್ನಿಸಿ ನ್ಯಾಯವಾದಿ ಕೆ.ಎಂ. ಶಾಜಹಾನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠ ಪಿಣರಾಯಿ ವಿಜಯನ್, ಮುಹಮ್ಮದ್ ರಿಯಾಸ್ ವಿರುದ್ಧ ಭ್ರಷ್ಟಾಚಾರ ತಡೆ ಕಾನೂನಿನ ಪ್ರಕಾರ ಎಫ್‌ಐಆರ್ ದಾಖಲಿಸುವಂತೆ ಇಂದು ಬೆಳಿಗ್ಗೆ ತೀರ್ಪು ನೀಡಿದೆ. ಇದು ಸಿಪಿಎಂಗೆ ಭಾರೀ ತಿರುಗೇಟಾಗಿ ಪರಿಣಮಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಪಿಣರಾಯಿ ವಿಜಯನ್, ಪುತ್ರಿ ವೀಣಾ ವಿಜಯನ್ ಮತ್ತು ಅಳಿಯ ಪಿ.ಎ ಮುಹಮ್ಮದ್ ರಿಯಾಸ್‌ರ ವಿರುದ್ಧ ಭ್ರಷ್ಟಾಚಾರ ತಡೆ ಕಾನೂನಿನ ಪ್ರಕಾರ ಪ್ರಕರಣ ದಾಖಲಿಸುವಂತೆ ಜಾರಿ ನಿರ್ದೇಶನಾಲಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಈ ಹಿಂದೆ ವರದಿ ಸಲ್ಲಿಸಿತ್ತು. ಆದರೆ ಆ ವಿಷಯದಲ್ಲಿ ಸರಕಾರ ಈತನಕ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಅದನ್ನು ಪ್ರಶ್ನಿಸಿ ನ್ಯಾಯವಾದಿ ಕೆ.ಎಂ. ಶಾಜಹಾನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ನ್ಯಾಯಾಲಯ ಆ ಬಗ್ಗೆ ಪ್ರಕರಣ ದಾಖಲಿಸುವಂತೆ ತೀರ್ಪು ನೀಡಿದೆ.





