ಕುಂಬಳೆ: ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ವಾಹನಗಳಿಂದ ಟೋಲ್ ವಸೂಲು ಮಾಡುವುದರ ವಿರುದ್ಧ ಕ್ರಿಯಾ ಸಮಿತಿ ಆರಂಭಿಸಿದ ಅನಿರ್ದಿಷ್ಟಾವಧಿ ಚಳವಳಿ ಇಂದು ಎರಡನೇ ದಿನ ಮುಂದುವರಿಯುತ್ತಿದೆ. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಚಳವಳಿಯಲ್ಲಿ ಸಕ್ರಿಯನಾಗಿ ಪಾಲ್ಗೊಳ್ಳುತ್ತಿದ್ದು ಸಮಸ್ಯೆಗೆ ಪರಿಹಾರ ಕಾಣದೆ ಇದರಿಂದ ಹಿಂಜರಿಯುವು ದಿಲ್ಲವೆಂದು ತಿಳಿಸಿದ್ದಾರೆ. ಇದೇ ವೇಳೆ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿದ್ದು ಇದ ಅಧಿಕಾರಿಗಳನ್ನು ಆತಂಕಕ್ಕೆ ಸಿಲುಕಿಸಿದೆ.
ಇದರಿಂದ ನಿನ್ನೆ ಶುಲ್ಕ ಸಂಗ್ರಹವನ್ನು ನಾಲ್ಕು ಗಂಟೆ ನಿಲ್ಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಶುಲ್ಕ ಸಂಗ್ರಹ ನಿಲ್ಲಿಸಿದ್ದ ಬಳಿಕ ಪೊಲೀಸರು ಹೆಚ್ಚಿನ ಭದ್ರತೆ ಏರ್ಪಡಿಸಿದುದರಿಂದ ಶುಲ್ಕ ಸಂಗ್ರಹ ಪುನರಾರಂಭಿಸಲಾಯಿತು.
ಇದೇ ವೇಳೆ ಸೋಮವಾರ ನಡೆದ ಚಳವಳಿಯಲ್ಲಿ ಭಾಗವಹಿಸದಿದ್ದ ಸಿಪಿಎಂ ಕಾರ್ಯಕರ್ತರು ಹಾಗೂ ನೇತಾರರು ನಿನ್ನೆ ಆರಂಭಗೊಂಡ ಅನಿರ್ಧಿಷ್ಟಾವಧಿ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಸಿಪಿಎಂ ಏರಿಯಾ ಸೆಕ್ರೆಟರಿ ಸಿ.ಎ. ಸುಬೈರ್ ಚಳವಳಿ ಉದ್ಘಾಟನೆಯ ಸ್ವಾಗತ ಭಾಷಣ ನಡೆಸಿದ್ದಾರೆ. ಕುಂಬಳೆ ಪಂ. ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ ಅಧ್ಯಕ್ಷೆ ವಹಿಸಿದರು. ಶಾಸಕ ಎನ್. ಎ. ನೆಲ್ಲಿಕುನ್ನು ಉದ್ಘಾಟಿಸಿದರು.







