ಉಪ್ಪಳ: ಮೂರು ಕೊಲೆ ಪ್ರಕರಣಗಳು ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಮಂಗಳೂರಿನ ನೌಫಲ್ (37) ಎಂಬಾತನ ಮೃತದೇಹ ನಿಗೂಢ ರೀತಿಯಲ್ಲಿ ಉಪ್ಪಳ ರೈಲ್ವೇ ಗೇಟ್ ಸಮೀಪ ಪತ್ತೆಯಾದ ಘಟನೆಗೆ ಸಂಬಂಧಿಸಿ ಕರ್ನಾಟಕ ಪೊಲೀಸರು ಕೂಡಾ ತನಿಖೆ ತೀವ್ರಗೊಳಿಸಿದ್ದಾರೆ. ಈ ಸಂಬಂಧ ಉಪ್ಪಳಕ್ಕೆ ತಲುಪಿದ ಕರ್ನಾಟಕ ಪೊಲೀಸರು ಮೃತದೇಹ ಕಂಡು ಬಂದ ಸ್ಥಳವನ್ನು ಪರಿಶೀಲಿಸಿ ದರು. ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದ ಸ್ಕೂಟರನ್ನು ಪರಿಶೀಲನೆ ನಡೆಸಲಾಯಿತು. ನೌಫಲ್ ಕೊಲೆಗೀಡಾಗಿರ ಬಹುದೆಂಬ ಸಂಶಯದ ಮೇರೆಗೆ ಕರ್ನಾಟಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಮಂಜೇಶ್ವರ ಪೊಲೀಸರು ನಡೆಸಿದ ತನಿಖೆಯಲ್ಲಿ ಕೊಲೆ ಕೃತ್ಯವಾಗಿದೆ ಎಂದು ಸಾಬೀತು ಪಡಿಸುವ ಯಾವುದೇ ಸೂಚನೆಗಳು ಇದುವರೆಗೆ ಲಭಿಸಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ಅಭಿಪ್ರಾಯದಂತೆ ನೌಫಲ್ ಅಪಘಾತದಿಂದ ಸಾವಿಗೀಡಾಗಿರಬಹುದೆಂದು ಮಂಜೇಶ್ವರ ಪೊಲೀಸರು ಅಂದಾಜಿಸಿದ್ದಾರೆ.
ನೌಫಲ್‌ನ ಮೃತದೇಹದ ಕುತ್ತಿಗೆಯಲ್ಲಿ ಕಂಡು ಬಂದ ಗಂಭೀರ ಗಾಯ ರೈಲು ಢಿಕ್ಕಿ ಹೊಡೆದಾಗ ಉಂಟಾಗಿರಬಹುದೆಂದು ಸಂಶಯಿಸಲಾಗುತ್ತಿದೆ. ಆದರೆ ಇದನ್ನು ಸಾಬೀತುಪಡಿಸಲು ಸಾಧ್ಯವಾಗದಿರುವುದು ತನಿಖೆಗೆ ಸವಾಲಾಗಿ ಪರಿಣಮಿಸಿದೆ. ಇದೇ ವೇಳೆ ಯಾರಾದರೂ ಹಿಂಬಾಲಿಸಿಕೊಂಡು ಬಂದಾಗ ನೌಫಲ್‌ಗೆ ರೈಲು ಢಿಕ್ಕಿ ಹೊಡೆದಿರಬಹುದೇ ಎಂಬ ಕುರಿತಾಗಿಯೂ ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕಾಗಿ ವಿವಿಧ ಸ್ಥಳಗಳಲ್ಲಿ ಸ್ಥಾಪಿಸಿರುವ ಸಿಸಿ ಕ್ಯಾಮರಾ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ನೌಫಲ್‌ನ ಮೊಬೈಲನ್ನು ಕಸ್ಟಡಿಗೆ ತೆಗೆದುಕೊಂಡು ಅದರಲ್ಲಿನ ಕರೆಗಳ ಕುರಿತು ಪರಿಶೀಲಿಸಲಾಗುತ್ತಿದೆ. ಫೋನ್‌ನಲ್ಲಿರುವ ಮಾಹಿತಿಗಳು ಎರಡು ದಿನಗಳೊಳಗೆ ಲಭಿಸಬಹುದೆಂಬ ನಿರೀಕ್ಷೆ ತನಿಖಾ ತಂಡದ್ದಾಗಿದೆ. ಕಳೆದ ಶನಿವಾರ ಬೆಳಿಗ್ಗೆ ನೌಫಲ್‌ನ ಮೃತದೇಹ ಉಪ್ಪಳ ರೈಲ್ವೇ ಗೇಟ್ ಸಮೀಪ ಪತ್ತೆಯಾಗಿತ್ತು.







