ತಲಶ್ಶೇರಿ: ರಾಜ್ಯದಲ್ಲಿ ಭಾರೀ ರಾಜಕೀಯ ಬಿರುಗಾಳಿ ಎಬ್ಬಿಸಿದ್ದ ಬಿಜೆಪಿ ಕಾರ್ಯಕರ್ತರಿಬ್ಬರನ್ನು ಕೊಲೆಗೈದ ಪ್ರಕರಣದ ಆರೋಪಿಗಳಾಗಿರುವ ಕುಖ್ಯಾತ ಕೋಡಿ ಸುನಿ ಸಹಿತ ಸಿಪಿಎಂ ಕಾರ್ಯಕರ್ತರಾದ ೧೪ ಮಂದಿಯನ್ನು ತಲಶ್ಶೇರಿ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (3) ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಬಿಜೆಪಿ ಕಾರ್ಯಕರ್ತರಾದ ನ್ಯೂಮಾಹಿ ಈಸ್ಟ್ ಪಳ್ಳೂರು ಪೂಶಾರಿ ಕೋವಿಲ್ ಸಮೀಪದ ಮೆಟೋಮ್ಮಲ್‌ಕಂಡಿ ವಿಜಿತ್ (25) ಮತ್ತು ಕರತ್ತೊಂಡತ್ತ್ ಹೌಸಿನ ಶಿನೋಜ್ (29) ಎಂಬವರು 2010 ಮೇ 28ರಂದು ಬೆಳಿಗ್ಗೆ 11 ಗಂಟೆಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ನ್ಯೂಮಾಹಿ ಪೆರಿಂಙಡಿ ರಸ್ತೆಯ ಕಲ್ಲಾಯಿ ಎಂಬಲ್ಲಿ ಅಕ್ರಮಿಗಳ ತಂಡ ಬೈಕ್‌ನ್ನು ತಡೆದು ನಿಲ್ಲಿಸಿ ಮಾರಕಾಯುಧಗಳಿಂದ ದಾಳಿ ನಡೆಸಿ ಬರ್ಬರವಾಗಿ ಕೊಲೆಗೈದಿತ್ತು. ಈ ಕೊಲೆಗೆ ಸಂಬಂಧಿಸಿ ಆರ್.ಎಂ.ಪಿ ನೇತಾರ ಟಿ.ಪಿ. ಚಂದ್ರಶೇಖರನ್‌ರನ್ನು ಕೊಲೆಗೈದ ಪ್ರಕರಣದ ಆರೋಪಿಗಳಾದ ಕುಖ್ಯಾತ ಕೋಡಿ ಸುನಿ, ಮೊಹಮ್ಮದ್ ಶಾಫಿ ಸೇರಿದಂತೆ ಒಟ್ಟು 14 ಮಂದಿ ಸಿಪಿಎಂ ಕಾರ್ಯಕರ್ತರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಆರೋಪಿಗಳ ವಿರುದ್ಧದ ಆರೋಪವನ್ನು ವಿಚಾರಣೆಯಲ್ಲಿ ಸಾಬೀತುಪಡಿಸಲು ಪ್ರೋಸಿಕ್ಯೂಷನ್ ವಿಫಲಗೊಂಡ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಖುಲಾಸೆಗೊಂಡ ಆರೋಪಿಗಳ ಪೈಕಿ ಕೋಡಿ ಸುನಿ, ಮುಹಮ್ಮದ್ ಶಾಫಿ, ಶಿನೋಜ್ ಎಂಬವರು ಟಿ.ಪಿ. ಚಂದ್ರಶೇಖರನ್‌ರನ್ನು ಕೊಲೆಗೈದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಈಗ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.







