ಬದಿಯಡ್ಕ: ಸಂಚರಿಸುತ್ತಿದ್ದ ರೈಲಿನಿಂದ ಬಿದ್ದು ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ನಾರಂಪಾಡಿ ನಿವಾಸಿ ಇಬ್ರಾಹಿಂ ಅಲ್ತಾಫ್ (18) ಮೃತಪಟ್ಟ ಯುವಕ. ನಿನ್ನೆ ಬೆಳಿಗ್ಗೆ ೬.೪೫ರ ವೇಳೆ ಕಣ್ಣೂರು ತಾಳೆಚೊವ್ವ ಎಂಬಲ್ಲಿ ದುರ್ಘಟನೆ ಸಂಭವಿಸಿದೆ. ಇಬ್ರಾಹಿಂ ಅಲ್ತಾಫ್ ಕಲ್ಲಿಕೋಟೆಯಿಂದ ಸ್ನೇಹಿತರೊಂದಿಗೆ ಮಲಬಾರ್ ಎಕ್ಸ್‌ಪ್ರೆಸ್‌ನಲ್ಲಿ ಕಾಸರಗೋಡಿಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ನಾಲ್ವರು ವಿದ್ಯಾರ್ಥಿಗಳೊಂದಿಗೆ ಇತ್ತೀಚೆಗೆ ಈತ ಪ್ರವಾಸಕ್ಕೆಂದು ತೆರಳಿದ್ದನು. ಇಬ್ರಾಹಿಂ ಅಲ್ತಾಫ್ ರೈಲಿನಿಂದ ಬೀಳುವುದನ್ನು ಕಂಡ ಸ್ನೇಹಿತರು ಹಾಗೂ ಇತರ ಪ್ರಯಾಣಿಕರು ಕೂಡಲೇ ಪೊಲೀಸರಿಗೆ ತಿಳಿಸಿದ್ದರು. ಬಳಿಕ ರೈಲ್ವೇ ಪೊಲೀಸರು ಹಾಗೂ ನಾಗರಿಕರು ಸೇರಿ ಅಲ್ತಾಫ್‌ನನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ನಾರಂಪಾಡಿಯ ಅಬ್ದುರಹ್ಮಾನ್ -ಆಯಿಷಾ ದಂಪತಿಯ ಪುತ್ರನಾದ ಮೃತನು ಸಹೋದರರಾದ ಅಸ್ಕರ್, ಅನ್ಸೀಫ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.






