ಕಾಸರಗೋಡು: ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅಂಗೀಕಾರ ನೀಡಿದೆ. ಇದರಂತೆ ಪ್ರಥಮ ವರ್ಷದ ಎಂಬಿಬಿಎಸ್ ಕೋರ್ಸ್ ಈ ತಿಂಗಳ ೨೨ರಂದು ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ೫೦ ಸೀಟುಗಳಿಗೆ ಪ್ರವೇಶ ನೀಡಲಾಗುವುದು.
ಈ ಹಿಂದೆ ಕೈಗೊಳ್ಳಲಾದ ತೀರ್ಮಾನದಂತೆ ಕಾಸರಗೋಡು ಜನರಲ್ ಆಸ್ಪತ್ರೆ ಟೀಚಿಂಗ್ ಆಸ್ಪತ್ರೆಯಾಗಿ ಕಾರ್ಯವೆಸಗಲಿದೆ. ಉಕ್ಕಿನಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಅಡ್ಮಿನಿಸ್ಟ್ರೇಟೀವ್ ಬ್ಲೋಕ್‌ನಲ್ಲಿ ಥಿಯರಿ ತರಗತಿಗಳು ಹಾಗೂ ಜನರಲ್ ಆಸ್ಪತ್ರೆಯಲ್ಲಿ ಪ್ರಾಕ್ಟಿಕಲ್ ತರಗತಿಗಳು ನಡೆಯಲಿದೆ. ಮೊದಲ ವರ್ಷದ ಪಠ್ಯಕ್ರಮದ ಪ್ರಕಾರ ಮೊದಲು ಥಿಯರಿ ತರಗತಿ ಆರಂಭಗೊಳ್ಳಲಿದೆ. ಇದರಿಂದಾಗಿ ಬಹುಪಾಲು ತರಗತಿಗಳು ಉಕ್ಕಿನಡ್ಕ ವೈದ್ಯಕೀಯ ಕಾಲೇಜಿನಲ್ಲೇ ನಡೆಯಲಿದೆ. ಈ ಕೋರ್ಸ್‌ಗಳಿಗಿ ರುವ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ರುವ ಕ್ರಮಗಳನ್ನು ಈ ಶಿಕ್ಷಣ ವರ್ಷದಲ್ಲೇ ಆರಂಭಿಸಲಾಗು ವುದೆಂದು ಶಿಕ್ಷಣ ಸಚಿವೆ ವೀಣಾ ಜೋರ್ಜ್ ತಿಳಿಸಿದ್ದಾರೆ.
ಉಕ್ಕಿನಡ್ಕದಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಶಿಲಾನ್ಯಾಸ ವನ್ನು 2013 ನವಂಬರ್ 30ರಂದು ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನೆರವೇರಿಸಿದ್ದರು. 2016ರಲ್ಲಿ ಇದರ ನಿರ್ಮಾಣ ಕೆಲಸ ಆರಂಭಗೊಂಡಿತು. 2018 ನವಂಬರ್ 25ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೂತನ ಸೌಕರ್ಯಗಳನ್ನೊಳಗೊಂಡ ಕಟ್ಟಡ ನಿರ್ಮಾಣದ ಉದ್ಘಾಟನೆ ನೆರವೇರಿಸಿದರು. ಅಡ್ಮಿನಿಸ್ಟ್ರೇಟಿವ್ ಕಟ್ಟಡ, ಅಧ್ಯಾಪಕ ಕ್ವಾರ್ಟರ್ಸ್, ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡ ನಿರ್ಮಾಣ ಕೆಲಸಗಳು ಬಹುತೇಕ ಪೂರ್ಣಗೊಂಡಿದೆಯಾದರೂ ಆಸ್ಪತ್ರೆ ಬ್ಲೋಕ್ ಕಟ್ಟಡದ ನಿರ್ಮಾಣ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಇದರ ಗುತ್ತಿಗೆದಾರರಿಗೆ ನೀಡಬೇಕಾಗಿರುವ ಹಣ ನೀಡದೇ ಇರುವುದರಿಂದಾಗಿ ಅದರ ನಿರ್ಮಾಣ ಕೆಲಸ ಸ್ಥಗಿತಗೊಂಡಿತ್ತು. ಈ ವತಿಯಿಂದ ಗುತ್ತಿಗೆದಾರರಿಗೆ 2 ಕೋಟಿ ರೂ. ನೀಡಲು ಬಾಕಿಯಿದೆ. ಈ ಹಣ ಸೇರಿದಂತೆ 50 ಕೋಟಿ ರೂ.ವನ್ನು ಸರಕಾರ ಈಗ ಮಂಜೂರು ಮಾಡಿದೆಯೆಂದು ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕ ಕೆ.ವಿ. ವಿಶ್ವನಾಥನ್ ತಿಳಿಸಿದ್ದಾರೆ. ಇನ್ನು ಬಾಕಿ ಉಳಿದಿರುವ ಕೆಲಸಗಳನ್ನು ಹೊಸ ಗುತ್ತಿಗೆದಾರರಿಗೆ ವಹಿಸಿಕೊಡಲಾಗುವುದೆಂದು ಅವರು ತಿಳಿಸಿದ್ದಾರೆ. ಜ್ಯಾರಿಯಲ್ಲಿ ಸರಕಾರಿ ನರ್ಸಿಂಗ್ ಕಾಲೇಜು ಮಾತ್ರವೇ ಉಕ್ಕಿನಡ್ಕದಲ್ಲಿ ಕಾರ್ಯವೆಗುತ್ತಿದೆ.
ಕಾಸರಗೋಡು ವೈದ್ಯಕೀಯ ಕಾಲೇಜಿನ ನಿರ್ಮಾಣಕ್ಕೆ ಕಿಫ್‌ಬಿ ನಿಧಿಯಿಂದ 160 ಕೋಟಿ ರೂ. ಮಂಜೂರು ಮಾಡಲಾಗಿದೆ. ಇಲ್ಲಿ ನೀರಿನ ಸರಬರಾಜಿಗಾಗಿ ಎಂಟು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ವೈದ್ಯಕೀಯ ಕಾಲೇಜು ಆಸತ್ರೆಗಾಗಿ ಒಟ್ಟು 273 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಕಾಸರಗೋಡಿನ ಹೊರತಾಗಿ ವಯನಾಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೂ ಅಂಗೀಕಾರ ಲಭಿಸಿದೆ. ಈ ಮೂಲಕ ಕೇರಳದ ಎಲ್ಲಾ 14 ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜು ಆರಂಭಿಸಿದಂತಾಗಿದೆ.