ಶಬರಿಮಲೆ: ಶಬರಿಮಲೆ ದೇಗುಲದ ಹೊಸ ಮುಖ್ಯ ಅರ್ಚಕರನ್ನಾಗಿ ತೃಶೂರು ಚಾಲಕುಡಿ ನಿವಾಸಿ ಎರನ್ನೂರು ಮನಯಿಲ್‌ನ ಇ.ಡಿ. ಪ್ರಸಾದ್‌ರನ್ನು ಆರಿಸಲಾಗಿದೆ. ಮಾಲಿಗಪುರಂ ಕ್ಷೇತ್ರದ ಪ್ರಧಾನ ಅರ್ಚಕರಾಗಿ ಕೊಲ್ಲಂ ಕುಟ್ಟಿಕಡ ನಿವಾಸಿ ಎಂ.ಜಿ. ಮನು ನಂಬೂದಿರಿ ಆಯ್ಕೆಗೊಂಡಿದ್ದಾರೆ. ಅದೃಷ್ಟ ಚೀಟಿ ಎತ್ತುವ ಮೂಲಕ ಈ ಇಬ್ಬರನ್ನು ಆರಿಸಲಾಗಿದೆ. ಶಬರಿಮಲೆ ದೇಗುಲದ ಅರ್ಚಕ ಸ್ಥಾನಕ್ಕಾಗಿ ಅಂತಿಮ ಹಂತ ಪಟ್ಟಿಯಲ್ಲಿ 14 ಮಂದಿಯ ಹೆಸರು ಒಳಗೊಂಡಿತ್ತು. ಆ ಪೈಕಿ ಡ್ರಾ ಎತ್ತುವ ಮೂಲಕ ಈ ಇಬ್ಬರು ಹೊಸ ಅರ್ಚಕರನ್ನು ಆರಿಸಲಾಗಿದೆ. ಶಬರಿಮಲೆ ದೇಗುಲದ ಪ್ರಧಾನ ಅರ್ಚಕರಾಗಿ ಆಯ್ಕೆಗೊಂಡ ಇ.ಡಿ. ಪ್ರಸಾದ್ ಸದ್ಯ ಅರೇಶ್ವರಂ ಶ್ರೀ ಧರ್ಮಶಾಸ್ತಾ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದಾರೆ. ಪ್ರಸಾದ್ ಅವರು ಶಬರಿಮಲೆ ದೇಗುಲದ ಅರ್ಚಕ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಿದ್ದು ಇದು ಮೂರನೇ ಬಾರಿಯಾಗಿದೆ. ದೇವರು ಕೊನೆಗೂ ನನ್ನ ಆಗ್ರಹ ಈಡೇರಿಸಿದ್ದಾರೆಂದು ಅದರಿಂದ ನಾನು ಭಾರೀ ಸಂತುಷ್ಟನಾಗಿದ್ದೇನೆಂದು ಅವರು ಹೇಳಿದ್ದಾರೆ.
