ಕುಂಬಳೆ: ಪೇಟೆಯ ಹೊಸ ಟ್ರಾಫಿಕ್ ಪರಿಷ್ಕರಣೆಯಿಂದಾಗಿ ಹಳೆ ಬಸ್ ನಿಲ್ದಾಣ ಪರಿಸರದ ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಕಾಣಬೇಕೆಂದು ಪಿಡಿಪಿ ಕುಂಬಳ ಪಂ. ಸಮಿತಿ ಸಭೆ ಆಗ್ರಹಿಸಿದೆ. ಬಸ್ ನಿಲ್ದಾಣ ಪರಿಸರದಲ್ಲಿ, ಪೊಲೀಸ್ ಠಾಣೆ ರಸ್ತೆಯಲ್ಲಿ ಹಲವಾರು ಸಣ್ಣ, ದೊಡ್ಡ ವ್ಯಾಪಾರ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಬಸ್ ನಿಲ್ದಾಣವನ್ನು ಆ ಭಾಗಕ್ಕೆ ಬದಲಿಸಿದ ಕಾರಣ ಬಸ್ ಪ್ರಯಾಣಿಕರು ಮೀಟರಗಳಷ್ಟು ದೂರ ನಡೆಯಬೇಕಾಗುತ್ತಿದೆ. ಪೆರ್ಲ, ಬದಿಯಡ್ಕ, ಮುಳ್ಳೇರಿಯ, ಸೀತಾಂಗೋಳಿ, ಪೇರಾಲ್ ಕಣ್ಣೂರು ಮೊದಲಾದ ಸ್ಥಳಗಳಿಗೆ ತೆರಳಬೇಕಾದ ಬಸ್ ಪ್ರಯಾಣಿಕರು ಕುಂಬಳ ಪೇಟೆಯಿಂದ ಆಟೋದಲ್ಲಿ ಸಂಚರಿಸಬೇಕಾದ ಸ್ಥಿತಿ ಇದೆ. ಕಾಸರಗೋಡು -ತಲಪ್ಪಾಡಿ ಭಾಗಕ್ಕಿರುವ ಪ್ರಯಾಣಿಕರ ಸ್ಥಿತಿಯೂ ಇದೇ ಆಗಿದೆ. ಈ ಬಗ್ಗೆ ಅಧಿಕಾರಿಗಳು ಮಧ್ಯೆ ಪ್ರವೇಶಿಸಬೇಕೆಂದು ಪಿಡಿಪಿ ಆಗ್ರಹಿಸಿದೆ. ಅಶ್ರಫ್ ಬದ್ರಿಯನಗರ, ಬಶೀರ್, ಅಶ್ರಫ್, ಇಸ್ಮಾಯಿಲ್ ಸಹಿತ ಹಲವರು ಭಾಗವಹಿಸಿದರು.
