ಹೊಸವರ್ಷ: ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಕಾರ್ಯಾಚರಣೆ; ಎಂಡಿಎಂಎ ಸಹಿತ ಯುವತಿ ಸೇರಿ ಐವರ ಸೆರೆ

ಕಾಸರಗೋಡು: ಹೊಸ ವರ್ಷ ಜಿಲ್ಲೆಗೆ ಮಾದಕದ್ರವ್ಯ, ಅಕ್ರಮ ಮದ್ಯ ಇತ್ಯಾದಿಗಳು ಹರಿದು ಬರುತ್ತಿರು ವುದನ್ನು ತಡೆಗಟ್ಟಲು ಪೊಲೀಸರು ಜಿಲ್ಲೆಯಾದ್ಯಂತವಾಗಿ  ಸ್ಪೆಷಲ್ ಡ್ರೈವ್ ಎಂಬ ಹೆಸರಲ್ಲಿ  ವಿಶೇಷ ಕಾರ್ಯಾಚರಣೆ ಆರಂಭಿಸಿದ್ದು, ಇದರಂತೆ ಮಾದಕ ದ್ರವ್ಯವಾದ 5.18  ಗ್ರಾಂ ಎಂಡಿಎಂಎ ಸಹಿತ ಓರ್ವ  ಯುವತಿ ಸೇರಿದಂತೆ ಐದು ಮಂದಿಯನ್ನು ಆದೂರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಪಟ್ಲ ನಿವಾಸಿ ಅಬ್ದುಲ್ ರೌಫ್, ಶಿರಿಬಾಗಿಲು ನಿವಾಸಿ ಅಬೂಬಕರ್ ಸಿದ್ದೀಕ್, ಅಡ್ಕತ್ತಬೈಲು ನಿವಾಸಿ ಅಮೀರ್ ಮೊಹಮ್ಮದ್ ಮುಹತ್ತಾಸಿಂ  ಮತ್ತು ಅಣಂಗೂರು ನಿವಾಸಿ ಜಾಸ್ಮಿನ್ ಬಂಧಿತರಾದ ಆರೋಪಿಗಳಾಗಿದ್ದಾರೆ. ಆದೂರು ಕೊಪ್ಪಳದಿಂದ ಇವರನ್ನು ಬಂಧಿಸಲಾಗಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ಮೇಲ್ನೋಟದಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಹೊಸವರ್ಷದ ವೇಳೆ ಜಿಲ್ಲೆಗೆ ವ್ಯಾಪಕವಾಗಿ ಅಕ್ರಮ ಮದ್ಯ ಹರಿದು ಬರುವ ಸಾಧ್ಯತೆಯನ್ನು ಪರಿಗಣಿಸಿ ಜಿಲ್ಲೆಯ ಎಲ್ಲಾ ಗಡಿ ಪ್ರದೇಶಗಳು ಅದರಲ್ಲೂ ವಿಶೇಷವಾಗಿ ಕೇರಳ- ಕರ್ನಾಟಕ ಗಡಿ ಪ್ರದೇಶಗಳು, ಹೋಮ್‌ಸ್ಟೇ, ರೆಸೋರ್ಟ್‌ಗಳು, ಹೋಟೆಲ್‌ಗಳು, ವಸತಿಗೃಹಗಳಿಗೆ ಪೊಲೀಸರು ವ್ಯಾಪಕವಾಗಿ ದಾಳಿ ಹಾಗೂ ತಪಾಸಣೆ ಆರಂಭಿಸಿದ್ದಾರೆ. ಇದು ಇನ್ನೂ ಮುಂದುವರಿಯುತ್ತಿದೆ. ಮಾತ್ರವಲ್ಲ ಇಂದು ಪೊಲೀಸರು ಇಂತಹ ಕಾರ್ಯಾಚರಣೆಗಳನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಗಡಿ ಪ್ರದೇಶಗಳಲ್ಲಿ ಎಲ್ಲಾ ವಾಹನಗಳನ್ನು ತೀವ್ರ ತಪಾಸಣೆಗೊಳಪಡಿಸಲಾಗುತ್ತಿದೆ. ಇಂದು ಸಂಜೆಯಿಂದ ಇಂತಹ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಹೊಸವರ್ಷಾಚರಣೆ ನಡೆಸುತ್ತಿರುವ ಎಲ್ಲಾ ಕೇಂದ್ರಗಳಲ್ಲೂ ಪೊಲೀಸರು ತೀವ್ರ ನಿಗಾ ಇರಿಸತೊಡಗಿದ್ದಾರೆ.

You cannot copy contents of this page