ಕಾಸರಗೋಡು: ನಾಲ್ಕು ತಿಂಗಳ ಒಳಗೆ ಕಾಲಾವಧಿ ಮುಗಿಸುವ ಸರಕಾರ ವೇತನ ಆಯೋಗವನ್ನು ನೇಮಕಗೊಳಿಸಿ ಮೂರು ತಿಂಗಳೊಳಗೆ ವೇತನ ಪರಿಷ್ಕರಣೆ ನಡೆಸುವುದಾಗಿ ಬಜೆಟ್‌ನಲ್ಲಿ ಘೋಷಿಸಿರುವುದು ನೌಕರರ ಕಣ್ಣಿಗೆ ಮಣ್ಣು ಹಾಕಲಿರುವ ಯತ್ನವಾಗಿದೆ ಎಂದು ಎನ್‌ಜಿಒ ಅಸೋಸಿಯೇಶನ್ ಆರೋಪಿಸಿದೆ. ವೇತನ ಪರಿಷ್ಕರಣೆಯನ್ನು ಕಳೆದ ೫ ವರ್ಷದಿಂದ ಸರಕಾರ ಬುಡಮೇಲುಗೊಳಿಸಲು ಯತ್ನ ನಡೆಸಿರುವುದಾಗಿಯೂ ಎನ್‌ಜಿಒ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಎ.ಟಿ. ಶಶಿ ನುಡಿದರು. ರಾಜ್ಯ ಮುಂಗಡ ಪತ್ರದಲ್ಲಿ ನೌಕರರನ್ನು ಅವಗಣಿಸಿರುವು ದನ್ನು ಪ್ರತಿಭಟಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಕೇರಳ ಎನ್‌ಜಿಒ ಅಸೋಸಿ ಯೇಶನ್ ಜಿಲ್ಲಾ ಸಮಿತಿ ನಡೆಸಿದ ಪ್ರತಿಭಟನಾ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನೌಕರರಿಗೆ ಹಾಗೂ ಅಧ್ಯಾಪಕರಿಗೆ ಇದುವರೆಗೆ ಮಂಜೂರು ಮಾಡಿದ ಕ್ಷಾಮ ಭತ್ಯೆಯ 187 ತಿಂಗಳ ಮೊತ್ತ ಬಾಕಿ ಉಳಿದಿದ್ದು, ಮೆಡಿಸೆಫ್‌ನಲ್ಲಿ ಸರಕಾರಿ ಪಾಲು ಕೂಡಾ ಪಾವತಿಸಿಲ್ಲ. ಕಳೆದ ೭ ವರ್ಷದಿಂದ ಲೀವ್ ಸರಂಡರ್ ನಿಷೇಧ ಮುಂದುವರಿಸಲಾಗಿದೆ ಎಂದು ಅವರು ದೂರಿದರು. ರಾಜ್ಯ ಸಮಿತಿ ಸದಸ್ಯೆ ವತ್ಸಲ ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಸುರೇಶ್ ಪೆರಿಯಂಗಾನಂ, ಎಂ.ಟಿ. ಪ್ರಸೀತ, ವಿಟಿಪಿ ರಾಜೇಶ್, ವಿ.ಎಂ. ರಾಜೇಶ್, ಕರುಣಾಕರನ್ ಆದೂರು, ರಘು ಇರಿಯಣ್ಣಿ, ಎಂ.ಕೆ. ಶ್ರೀನಿ ಮೋನ್, ರತೀಶ್ ಬಂದಡ್ಕ, ಗಿರಿಜ ಮಾಪಿಡಿಚ್ಚೇರಿ, ಶಜಿಲ್ ಪಿಣರಾಯಿ, ಕೆ. ಪ್ರಮೋದ್ ನೇತೃತ್ವ ನೀಡಿದರು.







