ನವದೆಹಲಿ: ಪರಿಸರ ಸೂಕ್ಷ್ಮ ಪೆರಿಯಾರ್ ಹುಲಿ ಮೀಸಲು ಪ್ರದೇಶದಲ್ಲಿರುವ ಶಬರಿಮಲೆ ದೇವಾಲಯ ಬಳಿಯ ಪಂಪಾ ನದಿ ದಡದಲ್ಲಿ ಶನಿವಾರದಂದು ಜಾಗತಿಕ ಅಯ್ಯಪ್ಪ ಸಂಗಮ ನಡೆಸಲು ತಿರುವಿದಾಂಕೂರ್ ಮುಜುರಾಯಿ ಮಂಡಳಿಗೆ ಅನುಮತಿ ನೀಡಿದ ಕೇರಳ ಹೈಕೋರ್ಟ್‌ನ ಆದೇಶದ ಬಗ್ಗೆ ಹಸ್ತಕ್ಷೇಪ ಮಾಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಈ ತಿಂಗಳ ೨೦ರಂದು ನಿಗದಿಯಾಗಿರುವ ಕಾರ್ಯಕ್ರಮದ ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಎ.ಎಸ್. ಚಂದ್ರೂರ್‌ಕರ್‌ರನ್ನೊಳಗೊಂಡ ಸುಪ್ರಿಂಕೋರ್ಟ್‌ನ ನ್ಯಾಯಪೀಠವು ಹೈಕೋರ್ಟ್ ಸೂಚಿಸಿದ ಶರತ್ತುಗಳನ್ನು ಅನುಸರಿಸಬೇಕೆಂದೂ ಹೇಳಿದೆ. ಈ ಕಾರ್ಯಕ್ರಮವು ಆಡಳಿತಾರೂಢ ಸಿಪಿಎಂ ನೇತೃತ್ವದ ಎಡರಂಗ ಸರಕಾರದ ಮೇಲ್ನೋಟದಲ್ಲಿ ನಡೆಯುತ್ತಿದೆ ಎಂದೂ ಅದು ಈ ಪ್ರದೇಶದ ಪರಿಸರ ಸೂಕ್ಷ್ಮ ಸ್ವರೂಪವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ಓರ್ವರು ಹೈಕೋರ್ಟ್‌ಗೆ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಮಾತ್ರವಲ್ಲ ಅಯ್ಯಪ್ಪ ಸಂಗಮ ಕಾರ್ಯಕ್ರಮವನ್ನು ತಡೆಯಬೇಕೆಂದು ಆಗ್ರಹಪಟ್ಟಿದ್ದರು. ಆದರೆ ಹೈಕೋರ್ಟ್ ಆ ಅರ್ಜಿಯನ್ನು ತಿರಸ್ಕರಿಸಿತ್ತು. ಅಯ್ಯಪ್ಪ ಸಂಗಮ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ಪರಿಶೀಲಿಸಿದ ಸುಪ್ರಿಂ ಕೋರ್ಟ್‌ನ ವಿಭಾಗೀಯ ಪೀಠ ಕೊನೆಗೆ ಅಯ್ಯಪ್ಪ ಸಂಗಮಕ್ಕೆ ಅಡ್ಡಿಯಿಲ್ಲವೆಂಬ ಮಹತ್ತರ ತೀರ್ಪು ನೀಡಿದೆ.