ತಲಪಾಡಿ: ಹೊಸದುರ್ಗದಲ್ಲಿನ ರಾಜಧಾನಿ ಜ್ಯುವೆಲ್ಲರಿ ಅಂಗಡಿ ಕಳವುಗೈದ ಆರೋಪಿ ದೇರಳಕಟ್ಟೆ ಮುತ್ತೂಟ್ ಫೈನಾನ್ಸ್ ಬ್ಯಾಂಕ್ ಕಳ್ಳತನ ಯತ್ನ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರ ಸೆರೆಯಾಗಿದ್ದಾನೆ. ಕಳೆದ ಮಾರ್ಚ್ 29ರಂದು ರಾತ್ರಿ ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯಲ್ಲಿರುವ ಮುತ್ತೂಟ್ ಫೈನಾನ್ಸ್ ಕಳ್ಳತನ ನಡೆಸಲು ಪ್ರಯತ್ನ ನಡೆಸಲಾಗಿತ್ತು. ಕಚೇರಿಯ ಮುಂಭಾಗದ ಬಾಗಿಲಿನ ಸೈರನ್ ಕೇಬಲ್ ತುಂಡುಮಾಡಿ ಕಳವು ಯತ್ನ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಕೋಣಾಜೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದ ಮಧ್ಯೆ ತಲೆಮರೆಸಿಕೊಂಡಿದ್ದ ಆರೋಪಿ ವೆಳ್ಳರಿಕುಂಡ್ ನಿವಾಸಿ ಅಬ್ದುಲ್ ಲತೀಫ್ (47)ನನ್ನು ಸೆರೆ ಹಿಡಿದಿದ್ದಾರೆ. ಈ ಪ್ರಕರಣದಲ್ಲಿ ಈ ಹಿಂದೆಯೇ ಇಡುಕ್ಕಿಯ ಮುರಳಿ, ಕಾಞಂಗಾಡ್‌ನ ಹರ್ಷಾದ್ ಎಂಬವರನ್ನು ಬಂಧಿಸಲಾಗಿದೆ. ಈಗ ಸೆರೆಯಾದ ಅಬ್ದುಲ್ ಲತೀಫ್ ಹೊಸದುರ್ಗ ರಾಜಧಾನಿ ಜ್ಯುವೆಲ್ಲರಿ ಕಳವು, ಚೆರುವತ್ತೂರು ವಿಜಯಾ ಬ್ಯಾಂಕ್ ಕಳ್ಳತನದ ಮುಖ್ಯ ಸಂಚುಕೋರ ಎಂದು ಪೊಲೀಸರು ತಿಳಿಸಿದ್ದಾರೆ.
ಜ್ಯುವೆಲ್ಲರಿಯಿಂದ ಅಂದು 20 ಕಿಲೋ ಬಂಗಾರ ಕಳವುಗೈದಿದ್ದು, ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಚಂದೇರ ಠಾಣೆ ವ್ಯಾಪ್ತಿಯ ಚೆರ್ವತ್ತೂರು ವಿಜಯಾ ಬ್ಯಾಂಕ್‌ನಿಂದ ೧೫.೮೦ ಕಿಲೋ ಬಂಗಾರ, ೨.೫ ಲಕ್ಷ ರೂ. ಕಳವು ನಡೆಸಲಾಗಿತ್ತು.