ಕಾಸರಗೋಡು: ಗಡಿನಾಡಿನಲ್ಲಿ ಕನ್ನಡದ ಮೇಲೆ ಹೇಗೆಲ್ಲ ಗದಾಪ್ರಹಾರ ಮಾಡಬಹುದೆಂಬ ಬಗ್ಗೆ ಅಧಿಕಾರಿಗಳ ಮಟ್ಟದಲ್ಲೇ ಸಂಶೋಧನೆ ನಡೆಸುತ್ತಿ ರುವುದಾಗಿ ಗಡಿನಾಡ ಕನ್ನಡಾಭಿಮಾನಿ ಗಳು ದುಃಖ ವ್ಯಕ್ತಪಡಿಸುತ್ತಿದ್ದಾರೆ. ಭವಿಷ್ಯದಲ್ಲಿ ಕನ್ನಡ ಎಂಬುದನ್ನು ತೊಳೆದು ಹಾಕಲು ಈಗ ಹುನ್ನಾರ ನಡೆಯುತ್ತಿದೆ ಎಂದು ಅವರು ಆರೋಪಿಸುತ್ತಾರೆ. ಕಾಸರಗೋಡು, ಮಂಜೇಶ್ವರ ತಾಲೂಕುಗಳು ಅಚ್ಚ ಕನ್ನಡ ಪ್ರದೇಶವೆಂದು ಹಿಂದೆ ಕರೆಯಲಾಗುತ್ತಿ ದ್ದರೂ, ಈಗ ಅದು ಮಂಜೇಶ್ವರ ತಾಲೂಕಿಗೆ ಸೀಮಿತವಾಗುತ್ತಿದೆ.
ಮಂಜೇಶ್ವರ ತಾಲೂಕಿನಿಂದಲೂ ಕನ್ನಡವನ್ನು ಹೊಡೆದೋಡಿಸಲು ಕನ್ನಡ ವಿದ್ಯಾರ್ಥಿಗಳಿಗೆ ಮಲೆಯಾಳ ಅಧ್ಯಾಪಕರನ್ನು ತರಗತಿಗಾಗಿ ನೇಮಕ ಮಾಡಲಾಗುತ್ತಿದೆ. ಬಹುತೇಕ ಶಾಲಾ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರು ಕಡಿಮೆಯಾಗಿ ಮಲಯಾಳ ಅಧ್ಯಾಪಕರು ಹೆಚ್ಚಾಗುತ್ತಿದ್ದಾರೆ. ಇದು ಮುಂದೆ ಕನ್ನಡವನ್ನೇ ಇಲ್ಲದಂತೆ ಮಾಡಲಿದೆ. ಕನ್ನಡ ಮಾತೃಭಾಷೆಯಲ್ಲಿ ಕಲಿಯಬೇಕಾದ ತಮ್ಮ ಹಕ್ಕನ್ನು ಕೂಡಾ ಇದು ಕಸಿಯುತ್ತದೆ. ಅನಿವಾರ್ಯವಾಗಿ ಮಲೆಯಾಳವನ್ನು ಒಪ್ಪಿಕೊಳ್ಳಬೇಕಾಗಿ ಬರುವಾಗ ಅತ್ತ ಕನ್ನಡವು ಅಲ್ಲ ಇತ್ತ ಮಲೆಯಾಳವೂ ಅಲ್ಲದ ಸಮ್ಮಿಶ್ರ ಕಲಿಕೆಯಿಂದ ವಿದ್ಯಾರ್ಥಿಗಳು ಹಿಂದೆ ಬೀಳುತ್ತಾರೆ.
ದೇಶದಾದ್ಯಂತ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಗುವಿಗೆ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡಬೇಕೆನ್ನುತ್ತಿದ್ದು, ಆದರೆ ಗಡಿನಾಡಲ್ಲಿ ಇದು ಚಾಲ್ತಿಗೆ ಬರುವುದನ್ನು ತಡೆಯಲಾಗುತ್ತಿದೆ.
ಮಂಜೇಶ್ವರ ತಾಲೂಕಿನಲ್ಲಿ ಕನ್ನಡ ಭಾಷಾ ಅಧ್ಯಾಪಕರನ್ನು ಹೆಚ್ಚು ನೇಮಕಗೊಳಿಸದಿದ್ದರೆ ಮುಂದೆ ಕನ್ನಡವೇ ಕಣ್ಮರೆಯಾಗಲಿದೆ ಎಂದು ಕನ್ನಡಾಭಿಮಾನಿಗಳು ನೊಂದು ನುಡಿಯುತ್ತಿದ್ದು ಅದಕ್ಕಿರುವ ಕೆಲಸ ಆರಂಭವಾಗಬೇಕಾಗಿದೆ.