ಕಾಸರಗೋಡು: ಮಾದಕ ದ್ರವ್ಯ ಪ್ರಕರಣದ ಆರೋಪಿಯನ್ನು ಪಿಟ್ ಎನ್‌ಡಿಪಿಎಸ್ ಕಾನೂನಿನ ಪ್ರಕಾರ ಪೊಲೀಸರು ಬಂಧಿಸಿದ್ದಾರೆ.
ಮುಳಿಯಾರು ಮಾಸ್ತಿಕುಂಡ್ ನಿವಾಸಿ ಮುಹಮ್ಮದ್ ಸಹದ್ (26) ಬಂಧಿತ ಆರೋಪಿ. ಈತ ಆದೂರು, ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಮತ್ತು ಎರ್ನಾಕುಳಂ ಎಕ್ಸೈಸ್ ರೇಂಜ್ ಕಚೇರಿಯಲ್ಲಿ ದಾಖಲಿಸಲಾದ ಮಾದಕ ದ್ರವ್ಯ ಪ್ರಕರಣಗಳಲ್ಲಿ ಆರೋಪಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ನಂತರ ಪೂಜಾಪುರ ಸೆಂಟ್ರಲ್ ಜೈಲಿಗೆ ಸಾಗಿಸಲಾಗಿದೆ. ಮಾರಾಟ ಮಾಡಲೆಂದು ಮಾದಕ ದ್ರವ್ಯವಾದ 99.54 ಗ್ರಾಂ ಎಂಡಿಎಂಎ ಕೈವಶವಿರಿಸಿದುದಕ್ಕೆ ಸಂಬಂಧಿಸಿ ಆದೂರು ಪೊಲೀಸ್ ಠಾಣೆಯಲ್ಲಿ ಹಾಗೂ ನಿಷೇಧಿತ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಬಂಧಿತನ ಹೆಸರಲ್ಲಿ ಕೇಸುಗಳಿವೆ. ಇದರ ಹೊರತಾಗಿ 83.896 ಗ್ರಾಂ ಎಂಡಿಎಂಎ ವಶಪಡಿಸಿದುದಕ್ಕೆ ಸಂಬಂಧಿಸಿ ಎರ್ನಾಕುಳಂ ಎಕ್ಸೈಸ್ ರೇಂಜ್ ಕಚೇರಿಯಲ್ಲೂ ಈತನ ವಿರುದ್ಧ ಬೇರೊಂದು ಕೇಸು ಇದೆ. ಪಿಟ್ ಎನ್‌ಡಿಪಿಎಸ್ ಕಾನೂನು ಪ್ರಕಾರ ಜಿಲ್ಲೆಯಲ್ಲಿ ಈತನಕ ಬಂಧಿತನಾದ ಆರನೇ ಆರೋಪಿಯಾಗಿದ್ದಾನೆ ಈತನೆಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯಭರತ್ ರೆಡ್ಡಿ ನೀಡಿದ ನಿರ್ದೇಶ ಪ್ರಕಾರ ಬೇಕಲ ಡಿವೈಎಸ್‌ಪಿ ವಿ.ವಿ. ಮನೋಜ್, ಆದೂರು ಪೊಲೀಸ್ ಇನ್ಸ್‌ಪೆಕ್ಟರ್ ಎ. ಅನಿಲ್ ಕುಮಾರ್, ಎಸ್‌ಐ ಕೆ. ವಿನೋದ್ ಕುಮಾರ್, ಎಸ್‌ಸಿಪಿಒ ಕೆ. ಮುರಳೀಧರನ್, ಕೆ.ವಿ. ಉಮೇಶ್ ಕುಮಾರ್ ಎಂಬ ವರನ್ನೊಳಗೊಂಡ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ.