ಉಪ್ಪಳ ಫ್ಲೈ ಓವರ್ ಅಡಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ನಾಗರಿಕರಿಂದ ವಿರೋಧ: ಕಾಮಗಾರಿ ಸ್ಥಗಿತ

ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಉಪ್ಪಳ  ಪೇಟೆಯಲ್ಲಿ ನಿರ್ಮಾಣಗೊಂಡಿರವ ಫ್ಲೈ ಓವರ್‌ನ ಅಡಿಭಾಗದಲ್ಲಿ ತಡೆಗೋಡೆ ನಿರ್ಮಾಣವನ್ನು ಸ್ಥಳೀಯರು ವಿರೋಧಿಸಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸಲಾಗಿದೆ. ಫ್ಲೈ ಓವರ್‌ನ ಎರಡು ಭಾಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಉಳಿದ ಭಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು. ಮೊನ್ನೆ ಸಂಜೆ ನಾಗರಿಕರು ತಡೆದು ವಿರೋಧ ವ್ಯಕ್ತಪಡಿಸಿದ್ದರು. ಅದರಿಂದಾಗಿ ಅಂದು ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ನಿನ್ನೆ ಬೆಳಿಗ್ಗೆ ನಡೆದುಹೋಗಲು ದಾರಿಯನ್ನು ಇರಿಸಿ ಮತ್ತೆ ತಡೆಗೋಡೆ ನಿರ್ಮಾಣ ಕೆಲಸವನ್ನು ಆರಂಭಿಸಲಾಗಿತ್ತು. ಆದರೆ ನಾಗರಿಕರು ತಲುಪಿ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿ ತಡೆಗೋಡೆ ಕಟ್ಟಬಾರದೆಂಬ ಬೇಡಿಕೆ ಇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮತ್ತೆ ಕೆಲಸವನ್ನು ನಿಲ್ಲಿಸಲಾಗಿದೆ. ಲೀಗ್ ನೇತಾರ ಗೋಲ್ಡನ್ ರಹಿಮಾನ್ ನಾಗರಿಕರ ಜೊತೆ ಸೇರಿ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಉಪ್ಪಳ ಪೇಟೆ ಜನನಿಬಿಡ ಪ್ರದೇಶವಾಗಿದ್ದು. ತಡೆಗೋಡೆ ನಿರ್ಮಿಸಿದರೆ ಜನರ ಸಂಚಾರಕ್ಕೆ ಸಮಸ್ಯೆ  ಉಂಟಾಗಲಿದೆಯೆಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ತಡೆಗೋಡೆ ಕಟ್ಟದಿದ್ದರೆ ವಾಹನಗಳು ಯದ್ವಾತದ್ವಾ ಸಂಚರಿಸಿ ಅಪಘಾತಕ್ಕೆ ಕಾರಣವಾಗಬಹುದೆಂದು ಹಲವು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. ಘಟನೆ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ತಲುಪಿದ್ದಾರೆ.

You cannot copy contents of this page