ನಿಲುಗಡೆ ಸಮಸ್ಯೆ: ತಲಪಾಡಿಯಿಂದ ಕಾಲಿಕ್ಕಡವ್‌ವರೆಗಿನ ಆಟೋ-ಟೆಂಪೋ- ಟ್ಯಾಕ್ಸಿ ಕಾರ್ಮಿಕರು ಸಂದಿಗ್ಧತೆಯಲ್ಲಿ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ತಲಪಾಡಿಯಿಂದ ಕಾಲಿಕ್ಕಡವ್‌ವರೆಗಿರುವ ವಿವಿಧ ಕಡೆಗಳಲ್ಲಿ ಹಲವು ವರ್ಷಗಳಿಂದ ನಿಲುಗಡೆಗೊಳಿಸಿ ಬಾಡಿಗೆಗೆ ಚಲಾಯಿಸುತ್ತಿದ್ದ ಆಟೋರಿಕ್ಷಾ, ಟೆಂಪೋ, ಟ್ಯಾಕ್ಸಿ ಕಾರ್ಮಿಕರು ತೀವ್ರ ಸಂದಿಗ್ಧತೆಗೆ ತುತ್ತಾಗಿರುವುದಾಗಿ ಬಿಎಂಎಸ್ ವಲಯ ಆಟೋ ಕಾರ್ಮಿಕರ ಸಭೆ ಆರೋಪಿಸಿದೆ.

ಫ್ಲೈಓವರುಗಳು, ಅಂಡರ್ ಪಾಸ್‌ಗಳನ್ನು ನಿರ್ಮಿಸಿರುವುದರೊಂದಿಗೆ ವಾಹನಗಳನ್ನು ಪಾರ್ಕ್ ಮಾಡಿ ಬಾಡಿಗೆಗೆ ಓಡಿಸಲು ಸಾಧ್ಯವಾಗದ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಅಂಡರ್ ಪಾಸ್, ಫ್ಲೈಓವರ್‌ಗಳ ಅಡಿ ಭಾಗದಲ್ಲಿ ವಾಹನಗಳನ್ನು ನಿಲ್ಲಿಸಿ ಇವರು ಇದುವರೆಗೆ ಬಾಡಿಗೆ ನಡೆಸುತ್ತಿದ್ದರು. ಆದರೆ ಈಗ ಈ ಸ್ಥಳಗಳಿಂದ ವಾಹಗಳನ್ನು ತೆರವುಗೊಳಿಸಬೇಕೆಂದು ಗುತ್ತಿಗೆದಾರರ ಉರಾಳುಂಗಲ್ ಸೊಸೈಟಿ ನೋಟೀಸು ನೀಡಿದೆ. ಅಂದಂದಿನ ಅನ್ನಕ್ಕಾಗಿ ದುಡಿಯುವ ಕಾರ್ಮಿಕರಿಗೆ ಇದು ಬಹಳ ಹೊಡೆತ ನೀಡಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣಬೇಕೆಂದು, ಇಲ್ಲದಿದ್ದರೆ ತೀವ್ರ ಹೋರಾಟಕ್ಕೆ ಮುಂದಾಗುವುದಾಗಿ ಕಾಸರಗೋಡು ವಲಯ ಆಟೋ ರಿಕ್ಷಾ ಕಾರ್ಮಿಕರ ಸಭೆ ಮುನ್ನೆಚ್ಚರಿಕೆ ನೀಡಿದೆ.

ಬಿಎಂಎಸ್ ಜಿಲ್ಲಾ ಕಚೇರಿಯಲ್ಲಿ ಜರಗಿದ ಸಭೆಯಲ್ಲಿ ಕರಂದಕ್ಕಾಡ್‌ನಿಂದ ಹೊಸ ಬಸ್ ನಿಲ್ದಾಣವರೆಗಿನ ಎಲ್ಲಾ ನಿಲುಗಡೆಗಳನ್ನು ಉಳಿಸಿಕೊಳ್ಳಬೇಕೆಂದು ಸಭೆ ಆಗ್ರಹಿಸಿದೆ. ಬಿಎಂಎಸ್ ಟೌನ್ ಸಮಿತಿ ಅಧ್ಯಕ್ಷ ಎ. ಕೇಶವ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ, ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಗುರುದಾಸ್ ಚೇನಕ್ಕೋಡು, ಹರೀಶ್ ಕುದ್ರೆಪ್ಪಾಡಿ, ವಿಶ್ವನಾಥ ಶೆಟ್ಟಿ, ಬಾಬು ಮೋನ್ ಮಾತನಾಡಿದರು.

RELATED NEWS

You cannot copy contents of this page