ಕುಂಬಳೆ: ಬಂದ್ಯೋಡಿನ ಹಳೆಯ ಕಟ್ಟಡದಲ್ಲಿ ಇತ್ತೀಚೆಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ತಮಿಳುನಾಡಿನ ತೆಂಗಾಶಿಪಟ್ಟಣ ನಿವಾಸಿಯೆಂದು ತಿಳಿದುಬಂದಿದೆ. ಕುಂಬಳೆ ಎಸ್‌ಐ ಪ್ರದೀಪ್ ಕುಮಾರ್, ಎಸ್‌ಸಿಪಿಒ ಸುಬಿನ್ ತೆಂಗಾಳಿಪಟ್ಟಣಕ್ಕೆ ತೆರಳಿ ನಡೆಸಿದ ತನಿಖೆಯಲ್ಲಿ ಈ ಬಗ್ಗೆ ಖಚಿತಗೊಂಡಿದೆ. ತೆಂಗಾಶಿ ಪಟ್ಟಣ ಬಳಿಯ ನಲುವ ಸಂಕೋಟಲ್ ನೋರ್ತ್ ಸ್ಟ್ರೀಟ್‌ನ ಗುರುಸ್ವಾಮಿ (70) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರ ಮೃತದೆಹ ಕಳೆದ ಜುಲೈ ೧೫ರಂದು ಸಂಜೆ ಬಂದ್ಯೋಡಿನ ಹಳೆಯ ಸರ್ವೀಸ್ ಸ್ಟೇಶನ್ ಕಟ್ಟಡದಲ್ಲಿ ಪತ್ತೆಯಾಗಿತ್ತು. ಜೀರ್ಣಿಸಿದ ಸ್ಥಿತಿಯಲ್ಲಿ ಕಂಡುಬಂದ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಆದರೆ ಮೃತಪಟ್ಟ ವ್ಯಕ್ತಿ ಯಾರೆಂದು ತಿಳಿಯಲು ಪೊಲೀಸರು ಮೃತದೇಹದ ಬಳಿ ಪತ್ತೆಯಾಗಿದ್ದ ಮೊಬೈಲ್ ಫೋನ್‌ನ ಸಿಮ್ ಪರಿಶೀಲಿಸಿದಾಗ ಅದು ತಿರುವನಂತಪುರ ವಿಳಾಸದಲ್ಲಿ ತೆಗೆದಿರುವುದಾಗಿ ತಿಳಿದುಬಂದಿದೆ. ಇದರಂತೆ ಎಸ್‌ಐ ಪ್ರದೀಪ್ ಕುಮಾರ್, ಎಸ್‌ಸಿಪಿಒ ಸುಬಿನ್ ತಿರುವನಂತಪುರಕ್ಕೆ ತೆರಳಿ ತನಿಖೆ ನಡೆಸಿದಾಗ ಸಿಮ್‌ನ ಯಥಾರ್ಥ ಮಾಲಕ ತೆಂಗಾಶಿ ಪಟ್ಟಣದಲ್ಲಿರುವುದಾಗಿ ತಿಳಿದುಬಂತು. ಈ ಹಿನ್ನೆಲೆಯಲ್ಲಿ ತೆಂಗಾಶಿಪಟ್ಟಣಕ್ಕೆ ತೆರಳಿ ಸಿಮ್‌ನ ಮಾಲಕನನ್ನು ಪತ್ತೆಹಚ್ಚಿದಾಗ ಆತನ ಕೈಯಿಂದ ಸಿಮ್ ವರ್ಷಗಳ ಹಿಂದೆ ನಷ್ಟಗೊಂಡಿರುವುದಾಗಿ ಆತ ತಿಳಿಸಿದ್ದಾನೆ. ಇದರಿಂದ ಆತನನ್ನು ಅಚ್ಚನ್ ಪುದೂರು ಪೊಲೀಸ್ ಠಾಣೆಗೆ ತಲುಪಿಸಿ ಮೃತಪಟ್ಟ ವ್ಯಕ್ತಿಯ ಸಿಸಿ ಟಿವಿ ದೃಶ್ಯ ತೋರಿಸಿದಾಗ ಮೃತಪಟ್ಟ ವ್ಯಕ್ತಿಯ ಸಂಬಂಧಿಕನ ಮಾಹಿತಿ ಲಭಿಸಿದೆ. ಇದರಂತೆ ಮೃತಪಟ್ಟ ಗುರುಸ್ವಾಮಿಯ ಮನೆಯವರನ್ನು ಭೇಟಿಯಾಗಿ ವೀಡಿಯೋ ತೋರಿಸಿದಾಗ ಮೃತ ವ್ಯಕ್ತಿ ಗುರುಸ್ವಾಮಿ ಎಂದು ಅವರು ಗುರುತುಹಚ್ಚಿದ್ದಾರೆ.
