ಕಾಸರಗೋಡು: ಕರಂದಕ್ಕಾಡ್‌ನಿಂದ ಆರಂಭಿಸಿ ರೈಲ್ವೇ ನಿಲ್ದಾಣದವರೆಗಿನ ರಸ್ತೆ ಸಂಚಾರ ಅಯೋಗ್ಯಗೊಂಡಿರುವ ಮಧ್ಯೆ ಈ ರಸ್ತೆಯಲ್ಲಿ ಖಾಸಗಿ ಮೊಬೈಲ್ ಸಂಸ್ಥೆಯೊಂದು ತೋಡಿದ ಹೊಂಡ ಅಪಾಯ ಆಹ್ವಾನಿಸುತ್ತಿದೆ. ಕೇಬಲ್ ಸ್ಥಾಪಿಸಲೆಂದು ರಸ್ತೆ ಮಧ್ಯೆ ಹೊಂಡ ತೆಗೆದಿದ್ದು, ಇದನ್ನು ಮುಚ್ಚಲು ಕಳಪೆ ಕಾಮಗಾರಿ ನಡೆಸಿರುವುದೇ ಹೊಂಡ ಬಾಯ್ದೆರೆದು ನಿಂತಿರಲು ಕಾರಣವೆನ್ನಲಾಗಿದೆ. ಈ ರಸ್ತೆಯ ತಾಲೂಕು ಆಫೀಸ್ ಮುಂಭಾಗ ಟ್ರಾಫಿಕ್ ಜಂಕ್ಷನ್ ಸಮೀಪ ಬಾಯ್ದೆರೆದ ಈ ಹೊಂಡವಿದ್ದು, ವಾಹನ ಸವಾರರಿಗೆ ಬೆದರಿಕೆಯೊಡ್ಡುತ್ತಿದೆ.
ದಿನಂಪ್ರತಿ ಶಾಲಾ ಮಕ್ಕಳು ಸಹಿತ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡಿದಂತಿರುವ ಈ ಹೊಂಡವನ್ನು ಮುಚ್ಚಲು ಕೂಡಾ ಕ್ರಮ ಉಂಟಾಗಿಲ್ಲ. ಈಗ ಪೊಲೀಸರು ವಾಹನ ಸವಾರರಿಗೆ ಎಚ್ಚರಿಕೆ ನೀಡಲು ಹಗ್ಗವೊಂದನ್ನು ಕಟ್ಟಿದ್ದು ಬಿಟ್ಟರೆ ಅಪಾಯ ಕೈಬೀಸಿ ಕರೆಯುತ್ತಿದೆ. ಕಳಪೆ ಕಾಮಗಾರಿಯಿಂದಾಗಿ ಮುಚ್ಚಳ ಮುರಿದು ಆಳವಾದ ಹೊಂಡ ಪ್ರತ್ಯಕ್ಷಗೊಂಡಿದೆ. ಒಂದೆಡೆ ರಸ್ತೆಯ ಶೋಚನೀಯ ಸ್ಥಿತಿ, ಇನ್ನೊಂದೆಡೆ ಈ ರೀತಿಯಲ್ಲಿ ಅಪಾಯ ಆಹ್ವಾನಿಸುತ್ತಿರುವಂತಹ ಹೊಂಡಗಳು ಸೇರಿದಾಗ ಈ ರಸ್ತೆಯೇ ಮೃತ್ಯುಕೂಪವಾಗಿ ಪರಿಣಮಿಸಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.






