ಕುಂಬಳೆ: ರಸ್ತೆಯ ಡಿವೈಡರ್‌ಗೆ ಸ್ಕೂಟರ್ ಢಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿ ಮೃತಪಟ್ಟ ದಾರುಣ ಘಟನೆ ನಿನ್ನೆ ರಾತ್ರಿ ಕುಂಬಳೆ ಬಳಿಯ ಮಾವಿನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಪಚ್ಚಂಬಳ ದೀನಾರ್ ನಗರದ ಮುಹಮ್ಮದ್ ಎಂಬವರ ಪುತ್ರ ಈಚು ಯಾನೆ ಯೂಸಫ್ (18) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ಶಿರಿಯ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ಟು ವಿದ್ಯಾರ್ಥಿಯಾಗಿದ್ದಾನೆ. ಶಾಲೆಯಲ್ಲಿ ನಿನ್ನೆ ನಡೆದ ಓಣಂ ಕಾರ್ಯಕ್ರಮದ ಬಳಿಕ ಸ್ನೇಹಿತನನ್ನು ಸ್ಕೂಟರ್‌ನಲ್ಲಿ ಮೊಗ್ರಾಲ್‌ನ ಮನೆಗೆ ತಲುಪಿಸಿದ ಯೂಸಫ್ ಪಚ್ಚಂಬಳಕ್ಕೆ ಮರಳುತ್ತಿದ್ದ ವೇಳೆ ರಾತ್ರಿ ೮.೩೦ಕ್ಕೆ ಹೆದ್ದಾರಿಯ ಡಿವೈಡರ್‌ಗೆ ಸ್ಕೂಟರ್ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಯೂಸಫ್‌ನನ್ನು ಆ ರಸ್ತೆಯಲ್ಲಿ ಬಂದ ಓಮ್ನಿ ವ್ಯಾನ್ ಪ್ರಯಾಣಿಕರು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮೃತದೇಹವನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿರಿಸಿದ್ದು, ಇಂದು ಬೆಳಿಗ್ಗೆ ಕುಂಬಳೆ ಪೊಲೀಸರು ತಲುಪಿ ಮಹಜರು ನಡೆಸಿದ ಬಳಿಕ ಮರಣೋ ತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.
ಮೃತನು ತಂದೆ, ತಾಯಿ ಖೈರುನ್ನೀಸ, ಸಹೋದರ ಅಬೂಬಕರ್ ಸಿದ್ದಿಕ್, ಸಹೋದರಿ ಆಯಿಶತ್ ಸಫ್ರೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.