ತಿರುವನಂತಪುರ: ಕೇಂದ್ರ ಸರಕಾರದ ಪಿಎಂಶ್ರೀ ಯೋಜನೆಗೆ ಕೇರಳ ಸರಕಾರ ಸಹಿ ಹಾಕಿರುವುದನ್ನು ವಿರೋಧಿಸಿ ಎಡರಂಗದ ಘಟಕ ಪಕ್ಷವಾದ ಸಿಪಿಐ ರಂಗಕ್ಕಿಳಿದಿರುವ ಹಿನ್ನೆಲೆಯಲ್ಲಿ ಪಿಎಂಶ್ರೀ ಯೋಜನೆಯ ಮಾನದಂಡಗಳಲ್ಲಿ ಕೆಲವೊಂದು ಸಡಿಲಿಕೆ ತರಲು ರಾಜ್ಯ ಸರಕಾರ ಮುಂದಾಗಿದೆ. ಇದರಂತೆ ಕೇಂದ್ರ ಸರಕಾರಕ್ಕೆ ಈ ಕುರಿತು ಪತ್ರ ಬರೆಯಲು ಸರಕಾರ ತೀರ್ಮಾನಿಸಿದೆ. ಆ ಮೂಲಕ ಸಿಪಿಐಯ ರೋಷವನ್ನು ತಗ್ಗಿಸಲು ಸರಕಾರ ಯತ್ನ ಆರಂಭಿಸಿದೆ. ಇದೇ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟದ ಅತೀ ನಿರ್ಣಾಯಕ ಸಭೆ ಇಂದು ಅಪರಾಹ್ನ ೩.೩೦ಕ್ಕೆ ನಡೆಯಲಿದೆ. ಇದು ಸರಕಾರ ಮತ್ತು ಎಡರಂಗಕ್ಕೆ ಅತೀ ನಿರ್ಣಾಯಕವಾಗಲಿದೆ. ಈ ಸಭೆಯಲ್ಲಿ ಸಿಪಿಐಯ ಸಚಿವರುಗಳು ಭಾಗವಹಿಸುವರೇ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ. ಪಿಎಂಶ್ರೀ ಯೋಜನೆಯನ್ನು ರದ್ದುಪಡಿಸುವ ತನಕ ಯಾವುದೇ ರೀತಿಯ ಹೊಂದಾಣಿಕೆಗೆ ನಾವು ಸಿದ್ಧರಿಲ್ಲವೆಂದು ಸಿಪಿಐ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ ಕೇಂದ್ರ ಸರಕಾರದೊಂದಿಗೆ ಮಾಡಿಕೊಳ್ಳಲಾದ ಒಪ್ಪಂದವನ್ನು ರದ್ದುಪಡಿಸಲು ಸಾಧ್ಯವಾಗದ ಸ್ಥಿತಿ ಇದೆಯೆಂದೂ ಆದರೆ ಅದರ ಮಾನದಂಡಗಳಲ್ಲಿ ಕೆಲವೊಂದು ತಿದ್ದುಪಡಿ ತರಲು ಸಿದ್ಧವೆಂಬ ಸೂಚನೆಯನ್ನು ಸಿಪಿಎಂ ಸಿಪಿಐಗೆ ನೀಡಿದೆ. ಅದರಂತೆ ಆ ಬಗ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲು ರಾಜ್ಯಸರಕಾರ ತೀರ್ಮಾನಿಸಿದ್ದು, ಆ ಮೂಲಕ ಸಿಪಿಐಯನ್ನು ತಣಿಸುವ ಯತ್ನದಲ್ಲಿ ತೊಡಗಿದೆ.







